ಪುತ್ತೂರು: ಪ್ರಸ್ತುತ ಶಾಲಾ ಕಾಲೇಜ್ ಗಳಲ್ಲಿ ಡ್ಯಾನ್ಸ್ ಹಾಡುಗಳಿಗೆ ಉತ್ತೇಜನ ನೀಡ್ತಾರೆ ಹೊರತು ಸಾಹಿತ್ಯಕ್ಕೆ ಉತ್ತೇಜನ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಗ್ರಾಮ ಸಾಹಿತ್ಯ ಸಂಭ್ರಮದಂತಹ ವೇದಿಕೆಗಳು ಮಕ್ಕಳ ಸೃಜಶೀಲ ಮನಸ್ಸುಗಳ ಬೆಳವಗೆಗೆ ಸಹಕಾರಿಯಾಗುತ್ತದೆ. ಸಾಹಿತ್ಯ ನಮ್ಮನ್ನು ಬೆಳೆಸುತ್ತದೆ ಹಾಗೂ ನಮ್ಮ ಬದುಕಿಗೆ ಶ್ರೀಮಂತಿಗೆ ನೀಡುತ್ತದೆ. ಶಾಲಾ ಕಾಲೇಜು ಮಕ್ಕಳನ್ನು ಎದುರಿಟ್ಟುಕೊಂಡು ಸಾಹಿತ್ಯದ ಕಾರ್ಯಕ್ರಮ ಮಾಡಿದಾಗ ಅದು ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದು ಹಿರಿಯ ಸಾಹಿತಿ ಎ.ಪಿ. ಮಾಲತಿ ಹೇಳಿದರು.
ಅವರು ಶನಿವಾರ ಸಂಪ್ಯದ ಅಕ್ಷಯ ಕಾಲೇಜ್ ಸಭಾಂಗಣದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು, ಗ್ರಾಮ ಪಂಚಾಯತ್ ಆರ್ಯಾಪು ಅದ್ವಯ ಕನ್ನಡ ಸಾಹಿತ್ಯ ಸಂಘ ಮತ್ತು ಐಕ್ಯೂಎಸಿ ಅಕ್ಷಯ ಕಾಲೇಜು ಸಂಪ್ಯ ಆಶ್ರಯದಲ್ಲಿ, ಚಿಗುರೆಲೆ ಸಾಹಿತ್ಯ ಬಳಗದ ಸಂಯೋಜನೆಯಲ್ಲಿ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಅವರ ಪೋಷಕತ್ವದಲ್ಲಿ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಅಭಿಯಾನದ ಅಂಗವಾಗಿ ನಡೆದ ಗ್ರಾಮ ಸಾಹಿತ್ಯ ಸಂಭ್ರಮ-೨೦೨೫ ಸರಣಿ ಸಾಹಿತ್ಯ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಗ್ರಾಮದಲ್ಲಿರುವ ಶಾಲೆಗಳನ್ನು ಗುರುತಿಸಿ ಸಾಹಿತ್ಯ ಆಸಕ್ತ ಮಕ್ಕಳನ್ನು ಬರಮಾಡಿಕೊಂಡು ಕವಿಗೋಷ್ಠಿ, ಕಥಾಗೋಷ್ಠಿ ಸಹಿತ ನನ್ನ ಆತ್ಮಮಿತ್ರ. ನನ್ನ ನೆಚ್ಚಿನ ಶಿಕ್ಷಕರು, ಪ್ರವಾಸ ಕಥನದಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಹೊಸತನತದ ಪ್ರಯೋಗಗಳಾಗಿದೆ. ೩೨ ಗ್ರಾಮಗಳಲ್ಲಿ 29 ಗ್ರಾಮದಲ್ಲಿ ಪೂರ್ಣಗೊಳಿಸಲಾಗಿದೆ. ಸಾಹಿತ್ಯ ಪರಿಷತ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿಯೂ ಐಎಎಸ್ ಬರೆಯಲು ಮಾಹಿತಿ ಕಾರ್ಯಾಗಾರಗಳನ್ನು ವಿವಿಧ ಶಿಕ್ಷಣ ಸಂಸ್ಥೆಗಳ ೨೫ ಸಾವಿಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ನಡೆಸಲಾಗಿದೆ. ತರಬೇತಿ ಮುಂದೆ ಐಎಎಸ್ ಐಪಿಎಸ್ ಅಧಿಕಾರಿಗಳು ಆಗಬಲ್ಲರು ಎಂಬ ಆತ್ಮವಿಶ್ವಾಸವಿದೆ ಎಂದರು.
ಆರ್ಯಾಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಹರ್ಷಿತಾ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷತೆ ವಹಿಸಿದ್ದರು. ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ ಎಚ್ ಕಾರ್ಯಕ್ರಮ ಉದ್ಘಾಟಿಸಿದರು. ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ಆರ್ಯಾಪು ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗೇಶ್, ಹಿರಿಯ ಕೃಷಿಕ ಬೂಡಿಯಾರ್ ರಾಧಾಕೃಷ್ಣ ರೈ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಜಯರಾಜ್ ಭಂಡಾರಿ ಶುಭ ಹಾರೈಸಿದರು. ಅಕ್ಷಯ ಕಾಲೇಜ್ ಸಂಚಾಲಕ ಜಯಂತ ನಡುಬೈಲು ಸನ್ಮಾನಿvರ ಕುರಿತು ಅಭಿನಂದನಾ ನುಡಿಗಳನ್ನಾಡಿದರು. ಅಧ್ವಯ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಹರೀಶ್ಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
: ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷಯ ಕಾಲೇಜಿನ ಪ್ರಿನ್ಸಿಪಾಲ್ ಸಂಪತ್ ಕೆ ಪಕ್ಕಳ ಸ್ವಾಗತಿಸಿದರು. ಚಿಗುರೆಲೆ ಸಾಹಿತ್ಯ ಬಳಗದ ಅಪೂರ್ವ ಕಾರಂತ್ ವಂದಿಸಿದರು. ಚಿಗುರೆಲೆ ಸಾಹಿತ್ಯ ಬಳಗದ ಆಶಾ ಮಯ್ಯ ಮತ್ತು ಗಿರೀಶ್ ಕೊಲ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪ್ರಣವ್ ಭಟ್ ಅವರು ಕನ್ನಡದಲ್ಲೂ ಐಎಎಸ್ ಬರೆಯುವ ಸಾಧ್ಯತೆಗಳ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ವಿದ್ಯಾರ್ಥಿಗಳಿಂದ ಬಾಲ ಕವಿಗೋಷ್ಠಿ, ಬಾಲ ಕಥಾಗೋಷ್ಠಿ, ಪ್ರವಾಸ ಕಥನ, ನನ್ನ ಆಪ್ತಮಿತ್ರ, ನನ್ನ ನೆಚ್ಚಿನ ಶಿಕ್ಷಕ/ಶಿಕ್ಷಕಿ ವಾಚನಗೋಷ್ಠಿ ನಡೆಯಿತು. ಸಭಾ ಕಾರ್ಯಕ್ರಮಕ್ಕೆ ಮೊದಲು ಆರ್ಯಾಪು ಗ್ರಾಪಂ ಬಳಿಯಿಂದ ಅಕ್ಷಯ ಕಾಲೇಜ್ ತನಕ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಅಕ್ಷಯ ಕಾಲೇಜು ಅಧ್ಯಕ್ಷ ಜಯಂತ ನಡುಬೈಲು ಚಾಲನೆ ನೀಡಿದರು.
ಸಮಾರೋಪ :
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಅಧ್ಯಕ್ಷರಾದ ಕಡಮಜಲು ಸುಭಾಸ್ ರೈ ವಹಿಸಿದ್ದರು. ಅಕ್ಷಯ ಕಾಲೇಜಿನ ವಿದ್ಯಾರ್ಥಿನಿ ವಿಂಧುಶ್ರೀ ಸಮಾರೋಪ ಭಾಷಣ ಮಾಡಿದರು. ವಿವೇಕಾನಂದ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಎಚ್. ಜಿ. ಶ್ರೀಧರ, ಅಕ್ಷಯ ಕಾಲೇಜ್‌ನ ಅದ್ವಯ ಕನ್ನಡ ಸಾಹಿತ್ಯ ಸಂಘ ಮತ್ತು ಐಕ್ಯೂಎಸಿ ಅಧ್ಯಕ್ಷ ಹರೀಶ್ಚಂದ್ರ, ಅಕ್ಷಯ ಕಾಲೇಜ್‌ನ ಪ್ರಾಚಾರ್ಯ ಶ್ರೀ ಸಂಪತ್ ಕೆ ಪಕ್ಕಳ ಸಂದರ್ಭೋಚಿತವಾಗಿ ಮಾತನಾಡಿದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ವಿವಿಧ ಗೋಷ್ಠಿಗಳ ನಿರೂಪಣೆಯನ್ನು ಕುರಿಯ ಶಾಲಾ ಗೌರವ ಶಿಕ್ಷಕಿ ಕು. ಕಾವ್ಯ, ಚಿಗುರೆಲೆ ಸಾಹಿತ್ಯ ಬಳಗದ ಕು, ಅಪೂರ್ವ ಕಾರಂತ್, ಶ್ರೀಮತಿ ಆಶಾಮಯ್ಯ, ಹರ್ಷಿತ ಹರೀಶ್ ಕುಲಾಲ್, ಪೂರ್ಣಿಮಾ ಪೆಲಂಪಾಡಿ ನಿರ್ವಹಿಸಿದರು.