ಅಲ್ಪಸಂಖ್ಯಾತರ, ದೇಶದ್ರೋಹಿಗಳ ರಕ್ಷಣೆ ಬಿಟ್ಟು ಬೇರೆ ಯಾವ ಕೆಲಸವನ್ನೂ ಮಾಡುತ್ತಿಲ್ಲ ಎಂದು ಟೀಕೆ
ಬೆಂಗಳೂರು: ರಾಜ್ಯ ಸರ್ಕಾರ ದೇಶದ್ರೋಹಿಗಳ ರಕ್ಷಣೆಗೆ ನಿಂತಿದೆ. ಪಾಕಿಸ್ಥಾನ್ ಜಿಂದಾಬಾದ್ ಎಂದು ಹೇಳುವವರಿಗೆ ರಕ್ಷಣೆ ಸಿಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ಮೈಸೂರು ಉದಯಗಿರಿ ಪೋಲೀಸ್ ಠಾಣೆ ಗಲಭೆ ವಿಚಾರದ ಕುರಿತು ಮಾತನಾಡಿದ ಅವರು, ವಿಧಾನಸೌಧದಲ್ಲಿ ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ರಕ್ಷಣೆ ಸಿಕ್ಕಿದಾಗಲೇ ದೇಶದ್ರೋಹಿಗಳಿಗೆ ಈ ಸರ್ಕಾರ ನಮ್ಮ ಪರವಾಗಿ ನಿಂತಿದೆ ಎಂದು ಅನ್ನಿಸಿದೆ. ನನ್ನ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಹೋಗುತ್ತಿದ್ದವರ ಮೇಲೆ ಅಟ್ಯಾಕ್ ನಡೆಯಿತು. ಪ್ರತಿ ಸಂದರ್ಭದಲ್ಲಿ ರಾಜ್ಯದ ಸಿಎಂ, ಡಿಸಿಎಂ, ಗೃಹ ಸಚಿವರು ದೇಶದ್ರೋಹಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪೊಲೀಸ್ ಠಾಣೆಗೆ ದಾಳಿ ಆದಾಗ ಡಿಸಿಎಂ ಅವರು ಮೈನರ್ಸ್ ಎಂದು ಹೇಳಿದರು. ಅಂದರೆ ಮೈನರ್ಸ್‌ಗೆ ರಾಜ್ಯದಲ್ಲಿ ಕಾನೂನು ಇಲ್ವಾ? ಅವರಿಗೆ ಕಲ್ಲು ಬಿಸಾಡಲು ಬರುತ್ತದೆ, ಆದರೆ ಕಾನೂನು ಕ್ರಮ ಮಾಡಲು ನಿಮಗೆ ಆಗಲ್ಲ. ಪರಮೇಶ್ವರ್ ಕೇವಲ ಅಲ್ಪಸಂಖ್ಯಾತರ, ಮುಸಲ್ಮಾನರ, ದೇಶದ್ರೋಹಿಗಳ ರಕ್ಷಣೆ ಬಿಟ್ಟು ಬೇರೆ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಹಿಂದೂಗಳಿಗೆ, ಅಧಿಕಾರಿಗಳಿಗೆ ರಕ್ಷಣೆ ಇಲ್ಲ. ಹಿಂದೂಗಳಿಗೆ ಅನ್ಯಾಯ, ಮುಸಲ್ಮಾನರಿಗೆ ರಕ್ಷಣೆ, ಇದು ಕರ್ನಾಟಕ ರಾಜ್ಯದಲ್ಲಿ ಆಗುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಆರ್‌ಎಸ್‌ಎಸ್‌ನವರು ಮೈಸೂರು ಗಲಭೆ ಹಿಂದೆ ಇದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ಕುರಿತು ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್‌ನವರು ಎಂದು ಯಾರು ನೋಡಿದ್ದಾರೆ? ಪ್ರತಿ ಸಂದರ್ಭದಲ್ಲೂ ಆರ್‌ಎಸ್‌ಎಸ್ ಟಾರ್ಗೆಟ್ ಮಾಡುವ ಕೆಲಸ ನಡೆಯುತ್ತಿದೆ. ಅವರ ತಪ್ಪು ಮುಚ್ಚಿಕೊಳ್ಳಲು ಆರ್‌ಎಸ್‌ಎಸ್ ಟಾರ್ಗೆಟ್ ಮಾಡುತ್ತಿರುವುದರಿಂದ ಕಾಂಗ್ರೆಸ್‌ಗೆ ಧಿಕ್ಕಾರ ಹೇಳುವ ಸಮಯ ಹತ್ತಿರ ಬಂದಿದೆ ಎಂದರು.