ಬೆಳ್ತಂಗಡಿ : ಚಾರ್ಮಾಡಿ ಗ್ರಾಮದ ಧರ್ಮಸ್ಥಳ ಮುಂಡಾಜೆ ಮೀಸಲು ಅರಣ್ಯದ ಅನಾರು ಪ್ರದೇಶದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದ ಕಾಡಾನೆ ರಾತ್ರಿ 11 ಗಂಟೆಗೆ ಸಾವನ್ನಪ್ಪಿದ್ದು, ಶುಕ್ರವಾರ ತಜ್ಞ ಪಶು ವೈದ್ಯರು ಆನೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ದಫನ ಮಾಡಿದರು.
25 ರಿಂದ 30 ವರ್ಷದ ಹೆಣ್ಣು ಆನೆ ಆಗಿದ್ದು, ಕಳೆದ ಎರಡು ತಿಂಗಳಿಂದ ಸರಿಯಾದ ಆಹಾರ ಸೇವಿಸುತ್ತಿರಲ್ಲಿಲ್ಲ ಎನ್ನಲಾಗಿದೆ. ಆನೆಯ ದೇಹದ ಹೊರಗಡೆ ಯಾವುದೇ ಗಾಯವಿಲ್ಲ, ದೇಹದ ಒಳಗೆ ಬಹು ಅಂಗಾಂಗ ವೈಫಲ್ಯ ಇರುವುದು ವೈದ್ಯರ ಮರಣೋತ್ತರ ಪರೀಕ್ಷೆ ವೇಳೆ ಕಂಡು ಬಂದಿದೆ ಎಂದು ಡಿಎಫ್ಓ ಅಂತೋಣಿ ಮರಿಯಪ್ಪ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಭದ್ರತಾ ದೃಷ್ಟಿಯಿಂದ ಆನೆಯ ಎರಡು ದಂತವನ್ನು ತೆಗೆದು ಬೆಳ್ತಂಗಡಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಬೆಳ್ತಂಗಡಿ ಡಾ. ರವಿ ಕುಮಾರ್.ಎಮ್, ಚಾರ್ಮಾಡಿ ಡಾ.ಯತೀಶ್ ಕುಮಾರ್.ಎಮ್.ಎಸ್. ಮರಣೋತ್ತರ ಪರೀಕ್ಷೆ ನಡೆಸಿದರು.
ಆನೆಯನ್ನು ಸ್ಥಳದಲ್ಲಿಯೇ ಹಿಟಾಚಿ ಮೂಲಕ ಗುಂಡಿ ತೆಗೆದು ಸ್ಥಳೀಯರಿಂದ ಪೂಜೆ ನಡೆಸಿ ನಂತರ ಅರಣಾಧಿಕಾರಿಗಳ ನೇತೃತ್ವದಲ್ಲಿ ದಫನ ಮಾಡಲಾಯಿತು