ಧಾರ್ಮಿಕ, ಸಾಂಸ್ಕೃತಿಕ ಅಥವಾ ಸಾಮಾಜಿಕ ಕಾರ್ಯಕ್ರಮದಲ್ಲಿ ಅತಿದೊಡ್ಡ ಮಾನವ ಸಂಗಮ
ಪ್ರಯಾಗ್‌ರಾಜ್ : ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ನಿನ್ನೆಯ ತನಕ ದಾಖಲೆಯ 50 ಕೊಟಿಗೂ ಅಧಿಕ ಜನ ಪುಣ್ಯಸ್ನಾನ ಮಾಡಿದ್ದಾರೆ. ಮಹಾಕುಂಭ ಇನ್ನೂ ನಡೆಯುತ್ತಿದ್ದು, ಮಹಾಶಿವರಾತ್ರಿ ದಿನವಾದ ಫೆ.26ರ ಅಮೃತ ಸ್ನಾನದೊಂದಿಗೆ ಮುಕ್ತಾಯವಾಗಲಿದೆ. ಈಗಾಗಲೇ 50 ಕೋಟಿಗೂ ಅಧಿಕ ಜನ ಪ್ರಯಾಗ್‌ರಾಜ್‌ಗೆ ಆಗಮಿಸಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಜನವರಿ 13ರಂದು ಪ್ರಾರಂಭವಾದಾಗಿನಿಂದ ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ 50 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಇದು ಮಹತ್ವದ ಮೈಲುಗಲ್ಲಾಗಿದೆ ಎಂದು ಯೋಗಿ ಅದಿತ್ಯನಾಥ್ ಹೇಳಿದ್ದಾರೆ. ಮಾನವನ ಇತಿಹಾಸದಲ್ಲಿಯೇ ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಅಥವಾ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿದೊಡ್ಡ ಸಭೆ ಇದಾಗಿದೆ. ದೇಶದಲ್ಲಿ 110 ಕೋಟಿ ಸನಾತನ ಧರ್ಮದ ಅನುಯಾಯಿಗಳಿದ್ದು, ಇಂತಹ ಬೃಹತ್ ಪಾಲ್ಗೊಳ್ಳುವಿಕೆ ಸನಾತನ ಧರ್ಮದ ಶಾಶ್ವತ ಮೌಲ್ಯಗಳ ಮೇಲಿನ ಅಚಲ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಮಹಾಕುಂಭ ಭಾರತದ ಸಾಮೂಹಿಕ ನಂಬಿಕೆಯ ಅಮೃತ ಕಾಲ ಎಂದು ಯೋಗಿ ಆದಿತ್ಯನಾಥ್ ಬಣ್ಣಿಸಿದ್ದಾರೆ. ಈ ಭವ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಸಂತರು, ಋಷಿಗಳು, ಕಲ್ಪವಾಸಿಗಳು ಮತ್ತು ಭಕ್ತರಿಗೆ ಮುಖ್ಯಮಂತ್ರಿ ಯೋಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಬೃಹತ್ ಆಧ್ಯಾತ್ಮಿಕ ಸಂಗಮದ ಸುಗಮ ಅನುಷ್ಠಾನಕ್ಕೆ ಮಹಾಕುಂಭಮೇಳದ ಆಡಳಿತ, ಸ್ಥಳೀಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ನೈರ್ಮಲ್ಯ ಕಾರ್ಮಿಕರು, ಸ್ವಯಂಸೇವಕರು ಮತ್ತು ಧಾರ್ಮಿಕ ಸಂಸ್ಥೆಗಳು ಮಾಡಿರುವ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
ಮಹಾಕುಂಭ ಪ್ರಾರಂಭವಾಗುವ ಮೊದಲು ಸರ್ಕಾರ ಸುಮಾರು 40 ಕೋಟಿಯಿಂದ 45 ಕೋಟಿ ಜನರು ಭಾಗವಹಿಸಲಿದ್ದಾರೆ ಎಂದು ಅಂದಾಜಿಸಿತ್ತು. ಆದರೆ ಎಲ್ಲ ನಿರೀಕ್ಷೆಗಳನ್ನು ಮೀರಿ ಜನರು ಮಹಾಕುಂಭಮೇಳಕ್ಕೆ ಆಗಮಿಸಿದ್ದಾರೆ. ಎಲ್ಲ ಅಪಪ್ರಚಾರಗಳನ್ನು, ವಿರೋಧಗಳನ್ನು ಮತ್ತು ಷಡ್ಯಂತ್ರಗಳನ್ನು ಜನರ ಭಕ್ತಿ ಹಿಮ್ಮೆಟ್ಟಿಸಿದೆ ಎಂದು ಯೋಗಿ ಆದಿತ್ಯನಾಥ್ ಬಣ್ಣಿಸಿದ್ದಾರೆ.