ಒಣ ಪ್ರತಿಷ್ಠೆಯಿಂದ ಶಿಕ್ಷಕಿಯರ ಒಳಜಗಳ | ಪೋಷಕರಿಂದ ಅಧಿಕಾರಿಗಳ ಮುಂದೆ ಆಕ್ರೋಶ

ವಿಟ್ಲ : ಒಣ ಪ್ರತಿಷ್ಠೆಯಿಂದ ಶಿಕ್ಷಕಿಯರಿಬ್ಬರ ಒಳಜಗಳದಿಂದಾಗಿ ಕನ್ಯಾನ ಗ್ರಾಮದ ಕಣಿಯೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ  ಸರ್ಕಾರಿ ಹಿರಿಯ  ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಂತಾಗಿದೆ.

46 ವಿದ್ಯಾರ್ಥಿಗಳಿರುವ ಕಣಿಯೂರು ಸರ್ಕಾರಿ ಶಾಲೆಯಲ್ಲಿ ಮೂವರು ಶಿಕ್ಷಕಿಯರಿದ್ದಾರೆ. 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ಈಗ ಮುಖ್ಯ ಶಿಕ್ಷಕಿಯಾಗಿದ್ದಾರೆ. ಏಳೆಂಟು ವರ್ಷಗಳಿಂದ ಇನ್ನೋರ್ವರು  ಸಹಾಯಕ ಶಿಕ್ಷಕಿಯಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಹಾಸನ ಮೂಲದವರು ಒಬ್ಬರು ಇದೇ ಕಣಿಯೂರು ಶಾಲೆಗೆ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಬಂದಿದ್ದಾರೆ. ಕಳೆದ ಏಳು ತಿಂಗಳ ಹಿಂದೆ ಶಿಕ್ಷಕಿ ಹಾಸನ ಮೂಲದ ಶಿಕ್ಷಕಿಗೂ ಮುಖ್ಯ ಶಿಕ್ಷಕಿಗೂ ಸಣ್ಣಪುಟ್ಟ ವಿಚಾರಗಳಲ್ಲಿ ಮನಸ್ತಾಪ ಹುಟ್ಟಿಕೊಂಡು ಒಳಜಗಳ ತಾರಕಕ್ಕೇರಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಇದೇ ಕಾದಾಟ ದಿನದಿಂದ ದಿನಕ್ಕೆ ಬೆಳೆಯಲು ಸಹಾಯಕ ಶಿಕ್ಷಕಿಯ  ಕುಮ್ಮಕ್ಕು ಕಾರಣವೆಂಬುದು ಪೋಷಕರ  ನೇರ ಆರೋಪವಾಗಿದೆ. ಶಿಕ್ಷಕಿಯರಿಬ್ಬರ ಒಣ  ಪ್ರತಿಷ್ಟೆಯಿಂದ ರೋಸಿ ಹೋದ ವಿದ್ಯಾರ್ಥಿಗಳು ಪ್ರತಿನಿತ್ಯ ಪೋಷಕರಲ್ಲಿ ಕಣ್ಣೀರಿಡಲು ಆರಂಭಿಸಿದ್ದರು. ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೋಂಡ ಪೋಷಕರು ಪದೇ ಪದೇ ಶಾಲೆಗೆ ಬಂದು ಶಿಕ್ಷಕಿಯರನ್ನು ತರಾಟೆಗೆ ತೆಗೆದು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ವರ್ಗಾವಣೆ ಪತ್ರ ನೀಡುವಂತೆ ಒತ್ತಾಯಿಸುತ್ತಿದ್ದರು.

































 
 

ಈ ಮಧ್ಯೆ ಮುಖ್ಯ ಶಿಕ್ಷಕಿ  ಅವರು ಒಂದಿಷ್ಟು ಒತ್ತಡ ಬಳಸಿ ವಿಟ್ಲ ಸಮೀಪದ ಕೆಲಿಂಜ ಶಾಲೆಗೆ ಹೆಚ್ಚುವರಿಯಾಗಿ ಕರ್ತವ್ಯಕ್ಕೆ ಹಾಜರಾದರು. ಸಹಾಯಕ ಶಿಕ್ಷಕಿ ಮನೆ ನಿರ್ಮಾಣದ ನೆಪದಲ್ಲಿ ಒಂದು ತಿಂಗಳ ರಜೆ ಪಡೆದು ತೆಪ್ಪಗಾದರು. ಇದರಿಂದಾಗಿ ನಲುವತ್ತಾರು ಮಕ್ಕಳನ್ನು ಹಾಸನ ಮೂಲದ ಶಿಕ್ಷಕಿಯೊಬ್ಬರೇ ನೋಡಿಕೊಳ್ಳುವಂತಾಗಿದೆ. ಶಿಕ್ಷಕಿಯರ ದೊಂಬರಾಟದಿಂದ ರೋಸಿಹೋದ ಪೋಷಕರು ಎರಡು ತಿಂಗಳಿಂದ ಶಿಕ್ಷಣಾಧಿಕಾರಿಗೆ ಪದೇ ಪದೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಮನನೊಂದ ಪೋಷಕರು ಶುಕ್ರವಾರ ಶಾಲೆಯಲ್ಲಿ ಜಮಾಯಿಸುವ ಬಗ್ಗೆ ಶಿಕ್ಷಣಾಧಿಕಾರಿಗೆ ಮಾಹಿತಿ ಲಭಿಸಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಬಂಟ್ವಾಳ ಶಿಕ್ಷಣಾಧಿಕಾರಿಯವರು ನಾಲ್ವರು ಸಿಬ್ಬಂದಿಗಳನ್ನು ಮತ್ತು ಸಿ.ಆರ್.ಪಿ.ಯವರನ್ನು ಕಣಿಯೂರು ಶಾಲೆಗೆ ಕಳುಹಿಸಿದ್ದರು. ಅಧಿಕಾರಿಗಳು ಬಂದಿರುವ ಮಾಹಿತಿ ಪಡೆದ  ಪೋಷಕರು ಶಾಲೆಗೆ ತೆರಳಿ ಅಧಿಕಾರಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸಭೆ ಸೇರಿದ ಪೋಷಕರು ಮತ್ತು ಅಧಿಕಾರಿಗಳ ಸಮ್ಮುಖದಲ್ಲೇ ಶಿಕ್ಷಕಿಯರಿಬ್ಬರ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹರಿಸಿ ಝಾಡಿಸಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕಾದಾಟ ನಡೆಸುತ್ತಿದ್ದ ಮುಖ್ಯ ಶಿಕ್ಷಕಿ ಮತ್ತು ಸಹಾಯಕ ಶಿಕ್ಷಕಿಯರನ್ನು ತರಾಟೆಗೆ ತೆಗೆದುಕಕೊಳ್ಳುವ ಮೂಲಕ ಪೋಷಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಪೋಷಕರ ಆಕ್ರೋಶದ ಮುಂದೆ ಅಧಿಕಾರಿಗಳ ಮಾತಿಗೆ ಬೆಲೆಯೇ ಇಲ್ಲದಂತಾಗಿತ್ತು. ಅಂತಿಮವಾಗಿ ಇಬ್ಬರು ಶಿಕ್ಷಕಿಯರಿಗೂ ಅಧಿಕಾರಿಗಳ ತಂಡ ಸಾಕಷ್ಟು ಬುದ್ಧಿ ಮಾತು ಹೇಳಿ ಹತ್ತುದಿನಗಳ ಕಾಲಾವಕಾಶ ನೀಡಿದೆ. ಮತ್ತೆ ಕಾದಾಟ ಮುಂದುವರಿದಲ್ಲಿ ಇಬ್ಬರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಒತ್ತಾಯದ ಮೇರೆಗೆ ಇಬ್ಬರು ಶಿಕ್ಷಕಿಯರೂ ಪಶ್ಚಾತ್ತಾಪ ವ್ಯಕ್ತಪಡಿಸಿ ಇನ್ನು ಮುಂದಕ್ಕೆ ಕಾದಾಟ ನಡೆಸದೇ ಮಕ್ಕಳ ಭವಿಷ್ಯದ ಬಗ್ಗೆ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತೇವೆಂದು ಬರಹ ಮೂಲಕ ಆಶ್ವಾಸನೆ ನೀಡಿದ್ದಾರೆ. ಇನ್ನಾದರೂ ಕಣಿಯೂರು ಸರ್ಕಾರಿ ಶಾಲೆ ಉತ್ತಮ ರೀತಿಯಲ್ಲಿ ನಡೆಯಲಿ ಎಂಬುದು ವಿದ್ಯಾಭಿಮಾನಿಗಳ ಆಶಯವಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top