ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ಸಂತ ಸೇವಾಲಾಲ್ ರ 286ನೇ ಜಯಂತಿಯನ್ನು ಪುತ್ತೂರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಆಚರಿಸಲಾಯಿತು..
ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ, ಪ್ರತೀ ವರ್ಷ ವಿವಿಧ ಮಹಾನ್ ನಾಯಕ್ ಜಯಂತಿ ಆಚರಣೆ ಮಾಡುವ ಮೂಲಕ ನೆನಪಿಸುವ ಕಾರ್ಯ ಮಾಡುತ್ತಿರುವುದು ಅರ್ಥಪೂರ್ಣ. ಹಾಗೆಯೇ ಬಂಜಾರ ಸಮುದಾಯದ ಮಹಾನ್ ನಾಯಕ್ ಸಂತ ಸೇವಾಲಾಲ್ ಅವರ ಆದರ್ಶ, ವ್ಯಕ್ತಿತ್ವ,, ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಪ್ರತಿನಿತ್ಯ ಅಳವಡಿಸಿಕೊಳ್ಳುವುದರಿಂದ ನಮ್ಮ ವ್ಯಕ್ತಿತ್ವಕ್ಕೆ ಉತ್ತಮಗೊಳ್ಳುವುದರ ಜತೆಗೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂಬುದು ನಮ್ಮೆಲ್ಲರ ಆಶಯ ಎಂದರು.

ಪುತ್ತೂರು ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್ ಉಪನ್ಯಾಸ ನೀಡಿ, ಶ್ರೀಕೃಷ್ಣನ ಪರಮಾತ್ಮನ ಜತೆ ದನಗಾಹಿಯಾಗಿದ್ದ ಸಂತ ಸೇವಾಲಾಲ್ ಚಾರಿತ್ರಿಕ ಪುರುಷ, ಸೇನಾನಿ, ಕಾಲಜ್ಞಾನಿಯಾಗಿ ಮಹಾತ್ಮರಾಗಿದ್ದರು. ಬಂಜಾರ ಸಮುದಾಯದ ಬುಡಕಟ್ಟು ಬಡ ಕುಟುಂಬದಲ್ಲಿ ಹುಟ್ಟಿದ ಸೇವಾಲಾಲ್ ಅವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ. ಬಂಜಾರ ಸಮುದಾಯಕ್ಕೆ ಜ್ಞಾನದ ಬೆಳಕನ್ನು ಹರಿಸಿದವರು. ವ್ಯಾಪಾರ, ಸೈನಿಕ ವೃತ್ತಿಗೆ ಹೆಸರಾದ ಸೇವಾಲಾಲ್ ಹೈದರಾಬಾದ್ ನಿಜಾಮರ ಸಂಸ್ಥಾನವನ್ನು ಬಾಧಿಸುತ್ತಿದ್ದ ಕಾಲರಾ ರೋಗವನ್ನು ದೂರ ಮಾಡುವಲ್ಲಿ ಶ್ರಮಿಸಿದ್ದರು. ಇದರಿಂದ ನಿಜಾಮರು ಅವರಿಗೆ ಮೋತಿಲಾಲ್ ಬಿರುದು ನೀಡಿ ಗೌರವಿಸಿದ್ದರು. ಈ ನಿಟ್ಟಿನಲ್ಲಿ ಅವರು ನಮಗೆಲ್ಲರಿಗೆ ಆದರ್ಶರು ಎಂದರು.
ವೇದಿಕೆಯಲ್ಲಿ ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ತಾಲೂಕು ಕಚೇರಿಯ ದಯಾನಂದ ಸ್ವಾಗತಿಸಿದರು. ಉಪತಹಸೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.