18 ವರ್ಷಗಳ ಬಳಿಕ ಲಾಭದ ಮುಖ ಕಂಡ ಬಿಎಸ್‌ಎನ್‌ಎಲ್‌

ಸೇವೆಗಳ ಸುಧಾರಣೆ, ಖಾಸಗಿ ಕಂಪನಿಗಳ ದರ ಹೆಚ್ಚಳದಿಂದಾಗಿ ಬಿಎಸ್‌ಎನ್‌ಎಲ್‌ಗೆ ಲಾಭ

ಹೊಸದಿಲ್ಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) 2007ರ ಬಳಿಕ ಇದೇ ಮೊದಲ ಬಾರಿಗೆ ಲಾಭ ಕಂಡಿದೆ. ಜಿಯೋ, ಏರ್‌ಟೆಲ್‌ ಸೇವೆಗಳಲ್ಲಿ ಏರಿಕೆ ಕಂಡ ಬಳಿಕ ಗ್ರಾಹಕರು ಬಿಎಸ್‌ಎನ್‌ಎಲ್‌ನತ್ತ ಮರಳುತ್ತಿದ್ದು, ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.

2025ರ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಬಿಎಸ್‌ಎನ್‌ಎಲ್‌ 262 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ನೆಟ್‌ವರ್ಕ್ ವಿಸ್ತರಣೆ ಮತ್ತು ಗ್ರಾಹಕ ಸೇರ್ಪಡೆಯಂತಹ ಕ್ರಮಗಳು ಲಾಭ ಗಳಿಕೆಗೆ ಕಾರಣವಾಗಿದೆ. ಇದರಿಂದ ಅರ್ಥಿಕ ವರ್ಷದ ಅಂತ್ಯದ ವೇಳೆಗೆ ಆದಾಯ ಬೆಳವಣಿಗೆಯು ಶೇ.20ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಸುಧಾರಣೆಯಾಗಲಿದೆ ಎಂದು ಸಂಸ್ಥೆ ಹೇಳಿದೆ. ಅರ್ಥಿಕ ವರ್ಷಾಂತ್ಯದ ವೇಳೆಗೆ ಆದಾಯ ಬೆಳವಣಿಗೆ ಶೇ.20ಕ್ಕಿಂತ ಹೆಚ್ಚು ಸುಧಾರಿಸಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಅಲ್ಲದೇ ಹೆಚ್ಚುವರಿಯಾಗಿ ಬಿಎಸ್‌ಎನ್‌ಎಲ್‌ ತನ್ನ ಹಣಕಾಸಿನ ವೆಚ್ಚ ಮತ್ತು ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ 1,800 ಕೋಟಿ ರೂ. ನಷ್ಟ ಇಳಿಕೆಯಾಗಿದೆ ಎಂದು ಬಿಎಸ್‌ಎನ್‌ಎಲ್‌ ಸಿಎಂಡಿ ಎ. ರಾಬರ್ಟ್ ಜೆ. ರವಿ ತಿಳಿಸಿದ್ದಾರೆ.

































 
 

ಬಿಎಸ್‌ಎನ್‌ಎಲ್‌ನ ಮೊಬಿಲಿಟಿ ಸೇವೆಗಳ ಆದಾಯ ವರ್ಷದಿಂದ ವರ್ಷಕ್ಕೆ ಶೇ.15ರಷ್ಟು ಹೆಚ್ಚಾಗಿದೆ. ಫೈಬರ್-ಟು-ದಿ-ಹೋಮ್ ಮತ್ತು ಲೀಸ್ಡ್ ಲೈನ್ ಸೇವೆಗಳ ಆದಾಯ ಅನುಕ್ರಮವಾಗಿ ಶೇ.18 ಮತ್ತು ಶೇ.14 ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ. ಬಿಎಸ್ಎನ್ಎಲ್ ಇತ್ತೀಚೆಗೆ ರಾಷ್ಟ್ರೀಯ ವೈಫೈ ರೋಮಿಂಗ್, ಎಲ್ಲ ಮೊಬೈಲ್ ಗ್ರಾಹಕರಿಗೆ ಉಚಿತ ಮನರಂಜನೆ ನೀಡುವ ಬಿಐಟಿವಿ ಮತ್ತು ಎಲ್ಲಾ ಎಫ್‌ಟಿಟಿಎಚ್ ಗ್ರಾಹಕರಿಗೆ ಐಎಫ್‌ಟಿವಿ ಮುಂತಾದ ಹೊಸ ಯೋಜನೆಗಳನ್ನು ಪರಿಚಯಿಸಿದೆ. ಸೇವೆಯ ಗುಣಮಟ್ಟ ಮತ್ತು ಸೇವಾ ಭರವಸೆಯ ಮೇಲಿನ ನಿರಂತರ ಗಮನ ಗ್ರಾಹಕರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಭಾರತದಲ್ಲಿ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರಾಗಿ ಬಿಎಸ್‌ಎನ್‌ಎಲ್‌ನ ಸ್ಥಾನವನ್ನು ಬಲಪಡಿಸಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರವು ಟೆಲಿಕಾಂ ಕಂಪನಿಗೆ ಸಾಕಷ್ಟು ಬೆಂಬಲ ನೀಡಿದೆ. 2023ರಲ್ಲಿ ಕೇಂದ್ರ ಸರ್ಕಾರ 89,000 ಕೋಟಿ ರೂ.ಗಳ ಪ್ಯಾಕೇಜ್‌ಗೆ ಅನುಮೋದನೆ ನೀಡಿತ್ತು. ಅದಕ್ಕೂ ಮುನ್ನ 2021ರಲ್ಲಿ 1.64 ಲಕ್ಷ ಕೋಟಿ ರೂ. ಹಾಗೂ 2019ರಲ್ಲಿ 69,000 ಕೋಟಿ ರೂ. ಗಳ ಪ್ಯಾಕೇಜ್‌ ಅನ್ನು ಘೋಷಣೆ ಮಾಡಿತ್ತು ಎಂಬುದು ಗಮನಾರ್ಹ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top