ಮಾಸ್ಕೊ: ರಷ್ಯಾದ ಮದ್ಯ ತಯಾರಕ ಕಂಪನಿಯೊಂದು ತನ್ನ ಹೊಸ ಬ್ರ್ಯಾಂಡ್‌ನ ಬಿಯರ್ ಕ್ಯಾನ್ ಮೇಲೆ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿತ್ರ ಮುದ್ರಿಸಿ ಅವಮಾನ ಮಾಡಿದ್ದು, ಈ ಕುರಿತಾದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ಭಾರತೀಯರ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದೆ.
ರಷ್ಯಾದ ಬಿಯರ್ ಕ್ಯಾನ್‌ನಲ್ಲಿ ಮಹಾತ್ಮ ಗಾಂಧಿಯವರ ಚಿತ್ರವನ್ನು ಪ್ರಿಂಟ್ ಮಾಡಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ವರದಿಗಳ ಪ್ರಕಾರ ರೆವರ್ಟ್ ಬ್ರಾಂಡ್‌ನ ಹೇಜಿ ಐಪಿಎ ಬಿಯರ್ ಕ್ಯಾನ್‌ಗಳಲ್ಲಿ ಗಾಂಧಿಯವರ ಫೋಟೋ ಮತ್ತು ಸಹಿಯನ್ನು ಮುದ್ರಿಸಲಾಗಿದೆ. ಈ ಬಿಯರ್ ಕ್ಯಾನ್ ಫೋಟೊ ಭಾರಿ ವೈರಲ್ ಆಗಿದ್ದು, ಮದ್ಯಮುಕ್ತ ಸಮಾಜದ ಕನಸು ಕಂಡ ಗಾಂಧೀಜಿಯವರಿಗೆ ಮಾಡಿದ ಅವಮಾನವಿದು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಅಮೆರಿಕದ ಕಂಪನಿಯೊಂದು ಬಿಯರ್ ಬಾಟಲ್‌ಗಳ ಮೇಲೆ ಗಾಂಧೀಜಿ ಭಾವಚಿತ್ರವನ್ನು ಮುದ್ರಿಸಿತ್ತು. ಈ ಬಗ್ಗೆ ಹೈದರಾಬಾದ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ನಂತರ ಅಮೆರಿಕದ ಕಂಪನಿ ತನ್ನ ಬಿಯರ್ ಉತ್ಪನ್ನಗಳಿಂದ ಗಾಂಧಿಯವರ ಚಿತ್ರವನ್ನು ತೆಗೆದುಹಾಕಿ ಕ್ಷಮೆಯಾಚಿಸಿತ್ತು. ಈ ಕುರಿತ ವಿಡಿಯೋವನ್ನು guruji4legends ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕರಿಬ್ಬರು ಗಾಂಧೀಜಿ ಭಾವಚಿತ್ರ ಹಾಗೂ ಅವರ ಸಹಿ ಇರುವ ಬಿಯರ್ ಕ್ಯಾನ್‌ನಗಳನ್ನು ಕೈಯಲ್ಲಿ ಹಿಡಿದಿರುವ ದೃಶ್ಯವನ್ನು ಕಾಣಬಹುದು.