ಕೇರಳದ ಚಿನ್ನಾಭರಣ ಮಳಿಗೆಯ ರೂಪದರ್ಶಿಯಾಗಲಿರುವ ಮೊನಾಲಿಸಾ
ಪ್ರಯಾಗ್‌ರಾಜ್: ಸೋಷಿಯಲ್ ಮೀಡಿಯಾ ಎಲ್ಲೋ ಇದ್ದವರನ್ನು ಇನ್ನೆಲ್ಲಿಗೋ ತಲುಪಿಸಿ ಬಿಡುತ್ತದೆ ಎನ್ನುವುದಕ್ಕೆ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ಎಂಬ ಅಲೆಮಾರಿ ಜನಾಂಗದ ಹುಡಗಿಯೇ ಸಾಕ್ಷಿ. ಬೆಕ್ಕಿನ ಕಣ್ಣಿನ ಸಹಜ ಸುಂದರಿ 16ರ ಹರೆಯದ ಮೊನಾಲಿಸಾ ಯೂಟ್ಯೂಬರ್‌ಗಳ ಕಣ್ಣಿಗೆ ಬಿದ್ದು ರಾತ್ರಿ ಬೆಳಗಾಗವುದುರೊಳಗೆ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದು, ಈ ಜನಪ್ರಿಯತೆ ಈಗ ಆಕೆಯ ಬದುಕನ್ನೇ ಬದಲಾಯಿಸಿದೆ. ಕೇರಳದ ಪ್ರಸಿದ್ಧ ಚಿನ್ನಾಭರಣ ಮಳಿಗೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮೊನಾಲಿಸಾ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಮೊನಾಲಿಸಾಗೆ ಅವಕಾಶ ಸಿಕ್ಕಿದೆ. ಸಿನಿಮಾಕ್ಕೂ ಮೊದಲು ಈಕೆ ಜ್ಯುವೆಲ್ಲರಿ ಬ್ರ್ಯಾಂಡ್‌ನ ಅಂಬಾಸಿಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಕೇರಳದ ಪ್ರಸಿದ್ಧ ಚೆಮ್ಮನೂರ್ ಜ್ಯುವೆಲ್ಲರಿ ತನ್ನ ಪ್ರಚಾರಕ್ಕೆ ಮೊನಾಲಿಸಾಳನ್ನು ರಾಯಭಾರಿ ಮಾಡಿಕೊಳ್ಳಲು ನಿರ್ಧರಿಸಿದೆ. ಮೊನಾಲಿಸಾ ಶುಕ್ರವಾರ ಕೇರಳದ ಕಲ್ಲಿಕೋಟೆಗೆ ಆಗಮಿಸಲಿದ್ದಾರೆ. ಅವರನ್ನು ಕಂಪನಿಯ ಪ್ರಚಾರ ರಾಯಭಾರಿಯಾಗಿ ಘೋಷಿಸಲಾಗುವುದು. ಅವರಿಗೆ 15 ಲಕ್ಷ ರೂ. ಸಂಭಾವನೆ ನೀಡಲಾಗುವುದು ಎಂದು ಈ ಬಗ್ಗೆ ಮಾಲೀಕ ಬಾಬಿ ಚೆಮ್ಮನೂರ್ ತಿಳಿಸಿದ್ದಾರೆ.
ಇದೇ ವೇಳೆ ಮೊನಾಲಿಸಾ ತಮ್ಮ ಚೊಚ್ಚಲ ಬಾಲಿವುಡ್ ಚಿತ್ರಕ್ಕಾಗಿ 21 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ. 1 ಲಕ್ಷ ರೂ.ಮುಂಗಡವಾಗಿ ಪಡೆದಿದ್ದಾರೆ. ತಮ್ಮ ಜೀವನವನ್ನು ಬದಲಾಯಿಸುವ ಅವಕಾಶದ ಬಗ್ಗೆ ಮೊನಾಲಿಸಾ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.
‘ನಮಸ್ತೆ. ನಾನು ಮಹಾಕುಂಭಕ್ಕೆ ಹೋಗಿ ರುದ್ರಾಕ್ಷಿಗಳನ್ನು ಮಾರುತ್ತಿದ್ದೆ. ಆದರೆ ವಿಧಿ ನನಗಾಗಿ ಬೇರೆ ಯೋಜನೆಗಳನ್ನು ಹೊಂದಿತ್ತು. ಶಿವ ಮತ್ತು ಸಂತರ ಆಶೀರ್ವಾದದಿಂದ ನಾನು ಜನಪ್ರಿಯತೆಯನ್ನು ಗಳಿಸಿದೆ. ನಾನು ನಿಮ್ಮೆಲ್ಲರಿಗೂ ನಿಜವಾಗಿಯೂ ಕೃತಜ್ಞಳಾಗಿದ್ದೇನೆ. ಈ ಕಾರಣದಿಂದಾಗಿ, ನನಗೆ ಬಾಲಿವುಡ್ ಚಿತ್ರವೊಂದರ ಆಫರ್ ಬಂದಿದೆ. ಚಿತ್ರದ ನಿರ್ದೇಶಕ ಸನೋಜ್ ಮಿಶ್ರಾ ಅವರು ವೈಯಕ್ತಿಕವಾಗಿ ನನ್ನ ಮನೆಗೆ ಭೇಟಿ ನೀಡಿ ಈ ಅವಕಾಶವನ್ನು ನೀಡಿದ್ದಾರೆ. ನಾನು ಯಾವಾಗಲೂ ನಾಯಕಿಯಾಗುವ ಕನಸು ಕಂಡಿದ್ದೆ. ಇಂದು ಆ ಕನಸು ನನಸಾಗಿದೆ. ಈ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.