ಕಡಬ : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕು ಕೃಷಿಕ ಸಮಾಜದ ಪ್ರಥಮ ಕಾರ್ಯಕಾರಿ ಸಮಿತಿ ಸಭೆ ಕಡಬ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ನಡೆಯಿತು.

ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಮುಖ್ಯ ಅತಿಥಿಯಾಗಿ ಮಾತನಾಡಿ, “ಕೃಷಿಕ ಸಮಾಜ ರೈತರು ಹಾಗೂ ಸರಕಾರದ ಕೊಂಡಿಯಾಗಿ ಕೆಲಸ ಮಾಡಲಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಂದ ರೈತರಿಗೆ ದೊರೆಯುವ ಸವಲತ್ತುಗಳನ್ನು ಪಡೆಯುವ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ಹಾಗೂ ಮಾಹಿತಿ ನೀಡಲು ರೈತರಿಗೆ ಕಾರ್ಯಾಗಾರಗಳನ್ನು ಮುಂದಿನ ದಿನಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ರೈತರು ಇಂದು ಅಡಕೆ ಬೆಳೆಯನ್ನೇ ನಂಬಿ ಕಂಗಲಾಗಿದ್ದಾರೆ. ರೋಗ ಭಾಧೆಯಿಂದ ಅಡಕೆ ಕೃಷಿ ನಾಶವಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು, ರೈತರು ಏಕ ಬೆಳೆಯನ್ನು ಅವಲಂಬಿಸದೆ ಮಿಶ್ರ ಬೆಳೆಯನ್ನು ಅನುಸರಿಸಬೇಕು” ಎಂದರು.

ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ, “ಕಡಬ ತಾಲೂಕು ಕೃಷಿಕ ಸಮಾಜ ಅಸ್ತಿತ್ವಕ್ಕೆ ಬಂದು ಈ ಭಾಗದ ರೈತರ ಅಭಿವೃದ್ಧಿಗೆ ಹೊಸ ಹೆಜ್ಜೆಯನ್ನು ಇಟ್ಟಂತಾಗಿದೆ. ಇದು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕಾದರೆ ಕೃಷಿಕ ಸಮಾಜದ ಸದಸ್ಯರ ಸಂಖ್ಯೆ ಹೆಚ್ಚಳವಾಗಬೇಕಿದೆ. ಮುಂದಿನ ದಿನಗಳಲ್ಲಿ ಸದಸ್ಯತ್ವ ಅಭಿಯಾನದೊಂದಿಗೆ ಸ್ವಂತ ನಿವೇಶನ ಮಾಡುವ ಉದ್ದೇಶವಿದೆ. ಕೃಷಿ ಉತ್ಪನ್ನಗಳಿಗೆ ವಿಧಿಸುವ ಜಿಎಸ್‌ಟಿ ಯನ್ನು ಕಡಿತ ಮಾಡುವ ದೃಷ್ಟಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು” ಎಂದರು.

ಕೃಷಿಕ ಸಮಾಜದ ಕಡಬ ತಾಲೂಕು ಉಪಾಧ್ಯಕ್ಷ ಕೆ.ಆರ್. ಸುಕುಮಾರ್, ಜಿಲ್ಲಾ ಪ್ರತಿನಿಧಿ ಮಹೇಶ್ ಕೆ. ಸವಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಹಾಯಕ ಕೃಷಿ ನಿರ್ದೆಶಕ ಯಶಸ್ ಮಂಜುನಾಥ್, ಕಡಬ ತಾಲೂಕು ಪಶುವೈದ್ಯಾಧಿಕಾರಿ ಡಾ. ಅಜಿತ್, ಸಾಮಾಜಿಕ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಯಶೋಧರ ಇಲಾಖೆ ಮಾಹಿತಿ ನೀಡಿದರು.
ಈ ಸಂದರ್ಭ ಕೃಷಿಕ ಸಮಾಜಕ್ಕೆ ಆಯ್ಕೆಯಾಗಿರುವ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಜಿಲ್ಲಾಧ್ಯಕ್ಷ ವಿಜಯ ಕುಮಾರ್ ರೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಡಬ ತಾಲೂಕು ಕೃಷಿ ಅಧಿಕಾರಿ ಟಿ. ಎಸ್, ಭರಮಣ್ಣನವರ್ ಸ್ವಾಗತಿಸಿ, ನಿರೂಪಿಸಿದರು. ಸಿಬ್ಬಂದಿ ಗೀತಾ ವಂದಿಸಿದರು.