ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮಗೌಡ ನಿಧನ

ಕಾರವಾರ: ಹಾಡುಹಕ್ಕಿ, ಪದ್ಮಶ್ರೀ‌ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅನಾರೋಗ್ಯದಿಂದಾಗಿ (88) ಇಂದು ಮುಂಜಾನೆ 3.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಸುಕ್ರಜ್ಜಿ ಎಂದೇ ಖ್ಯಾತಿ ಪಡೆದಿದ್ದ ಅವರು ಕೆಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ‌ ತಾಲೂಕಿನ ಬಡಿಗೇರಿ ಗ್ರಾಮದ ನಿವಾಸಿ ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದ ಸುಕ್ರಿ ಬೊಮ್ಮ ಗೌಡ ಅವರನ್ನು ಜಾನಪದ ಕೋಗಿಲೆ ಎಂದೂ ಕರೆಯಲಾಗುತ್ತಿತ್ತು.

ಸುಕ್ರಿ ಬೊಮ್ಮಗೌಡ ಬಾಲ್ಯದಲ್ಲಿ ತಾಯಿ ಮೂಲಕ ಜಾನಪದ ಹಾಡುಗಳನ್ನು ಕಲಿತಿದ್ದರು. ಜಾನಪದ ಹಾಡು, ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ಸಾಂಪ್ರದಾಯಿಕ ಸಂಗೀತ ಹಾಡುಗಳನ್ನು ಸಂರಕ್ಷಿಸಿಕೊಂಡು ಹೋಗುವಲ್ಲಿ ಶ್ರಮಿಸಿದ್ದರು. ಹಾಡುಗಳು ಮಾತ್ರವಲ್ಲದೆ ವಿವಿಧ ಸಾಮಾಜಿಕ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿದ್ದರು. ಬುಡಕಟ್ಟು ಜನಾಂಗವಾದ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ತಮಗೆ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡಲು ಜನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ನಿರ್ಧರಿಸಿದ್ದರು ಹಾಗೂ ತಮ್ಮ ಜನಾಂಗದ ಹಕ್ಕಿಗಾಗಿ ವಿಧಾನಸೌಧದಲ್ಲಿ ಪ್ರತಿಭಟನೆ ಕೂರುವ ಎಚ್ಚರಿಕೆಯನ್ನು ಕೂಡ ನೀಡಿದ್ದರು.

ಸಾಂಪ್ರದಾಯಿಕ ಬುಡಕಟ್ಟು ಸಂಗೀತವನ್ನು ಸಂರಕ್ಷಿಸುವಲ್ಲಿ ಮಾಡಿದ ಕೆಲಸಕ್ಕಾಗಿ ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಾಡೋಜ ಪ್ರಶಸ್ತಿ ಮತ್ತು ಜಾನಪದ ಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ರಾಜ್ಯ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಪದ್ಮಶ್ರೀ ಮಾತ್ರವಲ್ಲದೇ, ಸ್ಥಳೀಯ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ಸಂರಕ್ಷಿಸಿದ್ದಕ್ಕಾಗಿ 1988ರಲ್ಲಿ ಕರ್ನಾಟಕ ಸರ್ಕಾರದಿಂದ ಪ್ರಶಸ್ತಿ, 1999ರಲ್ಲಿ ‘ಜಾನಪದ ಶ್ರೀ’ ಪ್ರಶಸ್ತಿ 2006ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನೀಡಲಾಗುವ ‘ನಾಡೋಜ’ ಗೌರವ ಹಾಗೂ 2009ರಲ್ಲಿ ಸಂದೇಶ ಕಲಾ ಪ್ರಶಸ್ತಿ, ಆಳ್ವಾಸ್ ನುಡಿಸಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಇವರಿಗೆ ಲಭಿಸಿದ್ದವು.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top