ವಿರಾಟ್ ಕೊಹ್ಲಿಗೆ ಕೈತಪ್ಪಿದ ಅವಕಾಶ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದು, ವಿರಾಟ್ ಕೊಹ್ಲಿಗೆ ಕ್ಯಾಪ್ಟನ್ ಆಗುವ ಅವಕಾಶ ತಪ್ಪಿದೆ. ಈ ಹಿಂದೆ ಆರ್‌ಸಿಬಿ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ನೇಮಕವಾಗಲಿದ್ದಾರೆ ಎನ್ನಲಾಗಿತ್ತು. ಆದರೀಗ ತಂಡದ ಸಾರಥ್ಯವನ್ನು ಪಾಟಿದಾರ್ಗೆ ವಹಿಸಲಾಗಿದೆ.
ರಜತ್ ಪಾಟಿದಾರ್ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯ ಪ್ರದೇಶ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. 2021ರಿಂದ ಆರ್‌ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ನ ಕಾಯಂ ಸದಸ್ಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ 31 ವರ್ಷದ ಪಾಟಿದಾರ್ಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ.
ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ಫಾಫ್ ಡುಪ್ಲೆಸಿಸ್ ಕಾಣಿಸಿಕೊಂಡಿದ್ದರು. 2022ರಿಂದ 2024ರವರೆಗೆ ಡುಪ್ಲೆಸಿಸ್ ಮುಂದಾಳತ್ವದಲ್ಲಿ ಆರ್‌ಸಿಬಿ ಕಣಕ್ಕಿಳಿದಿತ್ತು. ಆದರೆ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡುಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿತ್ತು. ಮೆಗಾ ಹರಾಜಿನಲ್ಲಿ ಫಾಫ್ ಡುಪ್ಲೆಸಿಸ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಖರೀದಿಸಿದೆ. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಆರ್‌ಸಿಬಿ ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಖಚಿತವಾಗಿತ್ತು. ಹೀಗಾಗಿ ವಿರಾಟ್ ಕೊಹ್ಲಿ ಮರಳಿ ನಾಯಕರಾಗಲಿದ್ದಾರೆ ಎನ್ನಲಾಗಿತ್ತು. ಆದರೀಗ ಕೊಹ್ಲಿ ಬದಲಿಗೆ ರಜತ್ ಪಾಟಿದಾರ್ ಅವರನ್ನು ನಾಯಕರಾಗಿ ನೇಮಕ ಮಾಡಲಾಗಿದೆ. ಕಳೆದ 17 ಸೀಸನ್‌ಗಳಲ್ಲೂ ಆರ್‌ಸಿಬಿಗೆ ಐಪಿಎಲ್ ಕಪ್ ಮರೀಚಿಕೆಯಾಗಿ ಉಳಿದಿದೆ. ನಾಯಕ ಬದಲಾದ ನಂತರವಾದರೂ ಆರ್‌ಸಿಬಿ ಚಾಂಪೊಯನ್ ಆಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.