ಪುತ್ತೂರು: ದ್ವಾರಕಾ ಪ್ರತಿಷ್ಠಾನದ ವತಿಯಿಂದ ‘ದ್ವಾರಕೋತ್ಸವ-2025’, ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಫೆ.16 ಭಾನುವಾರ ಮುಕ್ರಂಪಾಡಿ ಗೋಕುಲ ಬಡಾವಣೆಯಲ್ಲಿ ನಡೆಯಲಿದೆ ಎಂದು ದ್ವಾರಕಾ ಪ್ರತಿಷ್ಠಾನದ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ದ್ವಾರಕಾ ಪ್ರತಿಷ್ಠಾನ ವಿವಿಧ ವೈದಿಕ, ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಯಕ್ಷಗಾನ, ಸಂಗೀತ, ಗೋಸೇವೆ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಭಾರತೀಯ ಸಂಸ್ಕೃತಿಯ ಸಂರಕ್ಷಣೆ, ಅನುಷ್ಠಾನ, ಸಂವರ್ಧನೆ ನಮ್ಮ ಧ್ಯೇಯವಾಗಿದೆ. ಆರ್ಥಿಕ ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಆದಾಯದ ಒಂದಷ್ಟು ಭಾಗವನ್ನು ಈ ಬಗೆಯ ಕಾರ್ಯಕ್ರಮಗಳಲ್ಲಿ ವಿನಿಯೋಗಿಸುವ ಮೂಲಕ ಸಾರ್ಥಕತೆಯನ್ನು ಹೊಂದುವ ಉದ್ದೇಶ ನಮ್ಮದಾಗಿದೆ ಎಂದರು.
ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ ಕುಂಬ್ಳೆ ಮಾತನಾಡಿ, ಬೆಳಿಗ್ಗೆ 9.30 ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಅಂಬಿಕಾ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ನೆರವೇರಿಸಲಿದ್ದು, ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ಟ ಅರ್ತೈಡ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಕ್ಕಳ ತಜ್ಞೆ, ಆಪ್ತ ಸಲಹೆಗಾರ್ತಿ ಡಾ.ಸುಲೇಖಾ ವರದರಾಜ್, ಹಿರಿಯ ಆರ್ಥಿಕ ತಜ್ಞ ವಿಶ್ವೇಶ್ವರ ಭಟ್ಟ ಬಂಗಾರಡ್ಕ, ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಪ್ರಸಾದ ಭಟ್ಟ ನೆಕ್ಕರಕಳೆಯ (ಸಾವಯವ ಕೃಷಿ), ಡಾ.ಗೋಪಾಲಕೃಷ್ಣ ಕಾಂಚೋಡು (ಭಾರತೀಯ ಸೇನೆ), ಪದ್ಯಾಣ ಶಂಕರನಾರಾಯಣ ಭಟ್ಟ (ಯಕ್ಷಗಾನ ಹಿಮ್ಮೇಳ), ಸ್ವಸ್ತಿಕ್ ಪದ್ಮ ಮುರ್ಗಜೆ (ವೈಜ್ಞಾನಿಕ ಸಂಶೋಧನೆ) ಹಾಗೂ ಸುದರ್ಶನ ಭಟ್ಟ ಬೆದ್ರಡಿ (ಆಹಾರೋದ್ಯಮ) ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಬಳಿಕ ವಿದ್ವಾನ್ ಗ.ನಾ.ಭಟ್ಟ ಮೈಸೂರು ಅವ ಕೃತಿ ಸತೀ ಸಾವಿತ್ರಿ, ಕೃಷ್ಣಮೂರ್ತಿ ಕೆಮ್ಮಾರ ಅವರ ಕೃತಿ ಪುರಾಣ ರಸಪ್ರಶ್ನಾವಲೀ ಯನ್ನು ವಿವೇಕಾನಂದ ಮಹಾವಿದ್ಯಾಲಯದ ಪರಿಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ. ಬಿಡುಗಡೆ ಮಾಡುವರು. ಮಿತ್ತೂರು ಪುರೋಹಿತ ಶ್ರೀನಿವಾಸ ಭಟ್ಟ ಪರಿಷ್ಕರಣೆ ಮತ್ತು ಪರಿವರ್ಧನೆ ಮಾಡುವರು. ಅವಿನಾಶ ಕೊಡಂಕಿರಿ, ರಮೇಶ ಭಟ್ಟ ಬಿ. ಹಾಗೂ ನವೀನ್‍ಕೃಷ್ಣ ಎಸ್. ಕೃತಿ ಪರಿಚಯ ಮಾಡುವರು. ಬಳಿಕ 11 ರಿಂದ ಸಂಪನ್ಮೂಲ ವ್ಯಕ್ತಿಗಳಿಂದ ಕೃಷಿ ಮತ್ತು ಆರ್ಥಿಕ ವಿಚಾರಗೋಷ್ಠಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1 ರಿಂದ ಕೀಬೋರ್ಡ್ ವಾದನ, 2 ರಿಂದ ಯಕ್ಷಗಾನ ತಾಳಮದ್ದಳೆ ‘ಚೂಡಾಮಣಿ’, ಸಂಜೆ 4 ರಿಂದ ಭಾವಗಾನ ಲಹರಿ, 6 ರಿಂದ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ವತಿಯಿಂದ ‘ಮಧುರಾಕೃತಿ-ಶ್ರೀ ಕೃಷ್ಣ ಲೀಲೆಗಳು’ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ನಿರ್ದೇಶಕ ಅಮೃತಕೃಷ್ಣ, ಖಜಾಂಚಿ ದುರ್ಗಾ ಗಣೇಶ್ ಉಪಸ್ಥಿತರಿದ್ದರು.