ಮಂಗಳೂರು : ಇಲ್ಲಿನ ಅಕ್ರಮ ಕಸಾಯಿಖಾನೆಗಳ ವಿರುದ್ದ ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಸಮರ ಸಾರಿದ್ದು, ಮಂಗಳೂರಿನ ಹೃದಯಭಾಗದಲ್ಲಿರುವ ಕುದ್ರೋಳಿ ಕಸಾಯಿಖಾನೆ ಪರಿಸರಕ್ಕೆ ದಿಢೀರ್ ದಾಳಿ ಮಾಡಿದ್ದಾರೆ.
ಕುದ್ರೋಳಿ ಕಸಾಯಿಖಾನೆ ಈ ಹಿಂದೆ ಅಧಿಕೃತವಾಗಿದ್ದರು ಸಹ ಹಸಿರು ಪೀಠದ ಆದೇಶದ ಹಿನ್ನಲೆಯಲ್ಲಿ ಸ್ಥಗಿತಗೊಳಿಸಿ ನಾಲ್ಕು ವರ್ಷ ಕಳೆದಿದೆ. ಆದರೆ ಈ ಕಸಾಯಿಖಾನೆ ಖಾಸಗಿ ಜಾಗದಲ್ಲಿ ಅಕ್ರಮವಾಗಿ ವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ಪ್ರತಿನಿತ್ಯ ಗೋವು, ಆಡು, ಕುರಿಗಳ ವಧಿಸುವ ಕುರಿತಾಗಿ ದೂರುಗಳಿದ್ದವು. ಈ ದೂರಿನನ್ವಯ ಮಂಗಳೂರು ಮೇಯರ್ ಮನೋಜ್ ಕುಮಾರ್ ಕುದ್ರೋಳಿ ಕಸಾಯಿಖಾನೆಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಮೇಯರ್ ಮತ್ತು ಅವರ ತಂಡ ಭಯಭೀತರಾದರು.
ಗರಂ ಆದ ಮೇಯರ್ ಮನೋಜ್ ಕುಮಾರ್
ಮಂಗಳೂರು ಮೇಯರ್ ಮನೋಜ್ ಕುಮಾರ್ ಇವರು ಕುರಿ ಸಾಕಾಣೆ ಕೇಂದ್ರದ ಹೆಸರಿನ ಅನಧಿಕೃತ ಕಟ್ಟಡವನ್ನು ಪರಿಶೀಲನೆ ನಡೆಸಿದಾಗ ದನ, ಆಡು, ಕುರಿಗಳ ರುಂಡಗಳು, ದೇಹದ ಭಾಗಗಳು ಕೊಣೆಯಲ್ಲಿ ರಾಶಿಯಾಗಿದ್ದದ್ದು ಪತ್ತೆಯಾಗಿದೆ. ಇದನ್ನು ನೋಡಿ ಕೋಪಗೊಂಡ ಮೇಯರ್ ಮನೋಜ್ ಕುಮಾರ್, ಆರೋಗ್ಯ ಅಧಿಕಾರಿಗಳೇ ನೀವೇನು ಮಾಡುತ್ತಿದ್ದೀರಿ, ನಗರದ ಹೃದಯಭಾಗದಲ್ಲೇ ಇಂತಹ ಚಟುವಟಿಕೆ ನಿರಂತರ ನಡೆಯುತ್ತಿರುವಾಗ ನಿಮಗೆ ಯಾಕೆ ಗೊತ್ತಾಗಿಲ್ಲ? ಕೂಡಲೇ ಕ್ರಮಕೈಗೊಳ್ಳಿ ಎಂದು ತಾಕೀತು ಮಾಡಿದ್ದಾರೆ.
ಖಾಸಗಿ ಜಾಗದಲ್ಲಿರುವ ಕುರಿ ಸಾಕಾಣೆ ಕೇಂದ್ರದ ಹೆಸರಿನ ಕಟ್ಟಡದೊಳಗೆ ಸುಮಾರು ಸಾವಿರಕ್ಕೂ ಅಧಿಕ ಆಡು, ಕುರಿ, ಜಾನುವಾರುಗಳ ರುಂಡ, ದೇಹದ ಭಾಗಗಳು ಪತ್ತೆಯಾಗಿದೆ. ಇದರಿಂದ ಕುದ್ರೋಳಿ ಪರಿಸರ ವಾಸನೆ ಬರುತ್ತಿತ್ತು ಎನ್ನಲಾಗಿದೆ. ನೊಣಗಳು ಪ್ರಾಣಿಗಳ ಅಸ್ತಿಪಂಜರ ಮೇಲೆ ಹಾರಾಡಿ ಮುತ್ತಿಕ್ಕುತ್ತಿದ್ದವು. ಆ ಕೋಣೆಯಲ್ಲಿ ಹೆಜ್ಜೆಹೆಜ್ಜೆಗೂ ಪ್ರಾಣಿಗಳ ದೇಹದ ಭಾಗಗಳು ಬಿದ್ದುಕೊಂಡಿದ್ದವು. ಮೇಯರ್ ದಾಳಿ ಸಂದರ್ಭ ಖಾಸಗಿ ಜಾಗದ ಮುಂಭಾಗದ ಕುರಿ ಸಾಕಾಣೆ ಕೇಂದ್ರದ ಕಟ್ಟಡ ತೆರೆದೇ ಇತ್ತು. ಆದರೆ ಹಿಂಭಾಗದ ಕಟ್ಟಡದತ್ತ ನೋಡುವಾಗ ಬೀಗ ಜಡಿದಿತ್ತು. ಬೀಗ ತೆರೆಯಲು ಯಾರೂ ಮುಂದಾಗದ ವೇಳೆ ಗರಂ ಆದ ಮೇಯರ್ ಮನೋಜ್ ಕುಮಾರ್ ಹಾಗೂ ಕಾರ್ಪೊರೇಟರ್ ಮನೋಹರ್ ಶೆಟ್ಟಿ, ತಾವೇ ಕಲ್ಲು ತಂದು ಬೀಗ ಮುರಿದು ಒಳನುಗ್ಗಿದ್ದಾರೆ.
ಈ ಸಂದರ್ಭ ಜಾನುವಾರು ವಧೆ ಮಾಡುವ ಸ್ಥಳ, ತೂಕ ಮಾಪನ, ಮಾಂಸ ಜೋತು ಹಾಕುವ ಹುಕ್‌ಗಳು ಕಂಡುಬಂದಿದೆ. ಇನ್ನು ಇದರ ವಿರುದ್ದ ಮಂಗಳೂರು ಉತ್ತರ ಬಿಜೆಪಿ ಶಾಸಕ ಡಾ.ವೈ ಭರತ್ ಶೆಟ್ಟಿ ಗರಂ ಆಗಿದ್ದಾರೆ. ಬ್ಯಾಂಕ್ ದರೋಡೆ ವೇಳೆ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದಾರೆ. ಹೀಗಾಗಿ ಗೋ ಹತ್ಯೆ ಮಾಡುವವರ ಕಾಲಿಗೂ ಪೊಲೀಸರು ಗುಂಡು ಹಾರಿಸಬೇಕು ಎಂದು ಸಚಿವ ಮಾಂಕಾಳು ವೈದ್ಯರೇ ಹೇಳಿದ್ಧಾರೆ. ನಾನು ಅದನ್ನ ಸ್ವಾಗತಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಪೊಲೀಸರು ಕ್ರಮ ಕೈಗೊಳ್ಳದೇ ಇದ್ದರೆ ಕಾನೂನು ಕೈಗೆತ್ತಿಗೊಳ್ಳ ಬೇಕೆಂದು ಎಚ್ಚರಿಕೆ ಶಾಸಕರು ನೀಡಿದ್ದಾರೆ.
ಒಟ್ಟಾರೆ ಮಂಗಳೂರಿನಲ್ಲಿ ಅಕ್ರಮ ಕಸಾಯಿಖಾನೆಗಳು ಅಸ್ತಿತ್ವದಲ್ಲಿರೋದಕ್ಕೆ ಸಾಕ್ಷಿ ಲಭಿಸಿದೆ. ಗೋ ಗಳನ್ನು ಕಳವು ಮಾಡಿ ನಗರದ ಹೃದಯಭಾಗದಲ್ಲಿ ಗೋ ವಧೆ ನಡೆಸಲಾಗುತ್ತಿದೆ. ಸ್ವತಃ ಮಂಗಳೂರು ಮೇಯರ್ ದಾಳಿಯಲ್ಲಿ ಈ ಅಕ್ರಮ ಪತ್ತೆಯಾಗಿರೋದ್ರಿಂದ ಮಂಗಳೂರಿನ ಬಿಜೆಪಿ ಶಾಸಕರು ಕೂಡ ಮೇಯರ್ ಕಾರ್ಯದ ಬಗ್ಗೆ ಶ್ಲಾಘಿಸಿದ್ದಾರೆ.