ಭಕ್ತರ ದಟ್ಟಣೆ ನಿಭಾಯಿಸಲಾಗದೆ ರೈಲು ನಿಲ್ದಾಣವೇ ಬಂದ್
ಪ್ರಯಾಗ್‌ರಾಜ್ : ಮಹಾಕುಂಭಮೇಳಕ್ಕೆ ನಿರೀಕ್ಷೆಗೂ ಮೀರಿ ಜನ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ದಿನನಿತ್ಯ ಉಂಟಾಗುತ್ತಿದೆ. ಭಾನುವಾರ ಸುಮಾರು 300 ಕಿ.ಮೀ. ಟ್ರಾಫಿಕ್ ಜಾಮ್ ಆಗಿ ಭಕ್ತರು ಇನ್ನಿಲ್ಲದ ಬವಣೆ ಅನುಭವಿಸಿದ್ದಾರೆ. ಅನೇಕರು ಇದನ್ನು ಜಗತ್ತಿನ ಅತಿದೊಡ್ಡ ಟ್ರಾಫಿಕ್ ಜಾಮ್ ಎಂದು ಬಣ್ಣಿಸಿದ್ದಾರೆ. ಸಂಗಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಿಕ್ಕಿಬಿದ್ದಿದ್ದವು. ಸರತಿ ಸಾಲಿನ ಬಾಲ ಸುಮಾರು 300 ಕಿ.ಮೀ. ದೂರವಿತ್ತು ಎಂದು ಹಲವರು ಅನುಭವ ಹಂಚಿಕೊಂಡಿದ್ದಾರೆ. ಈ ಸಲ 45 ಕೋಟಿ ಜನ ಮಹಾಕುಂಭಕ್ಕೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಈಗಾಗಲೇ 43 ಕೋಟಿಗೂ ಅಧಿಕ ಜನ ಭೇಟಿ ನೀಡಿದ್ದಾರೆ. ಕುಂಭಮೇಳ ಮುಗಿಯಲು ಇನ್ನೂ 16 ದಿನ ಬಾಕಿಯಿದ್ದು, ಸಂದರ್ಶಕರ ಸಂಖ್ಯೆ 50 ಕೋಟಿ ಮೀರುವ ಸಾಧ್ಯತೆಯಿದೆ. ಜಗತ್ತಿನ ಎಲ್ಲೆಡೆಯಿಂದ ಜನರು ಉತ್ಸಾಹದಿಂದ ಆಗಮಿಸುತ್ತಿದ್ದು, ನಿತ್ಯವೂ ಭಾರಿ ಜನಸಂದಣಿ ಇರುತ್ತದೆ. ಸಂಚಾರ ನಿಯಂತ್ರಣಕ್ಕೆ ಎಷ್ಟೆ ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿದರೂ ವಾಹನಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಕುಂಭಮೇಳ ನಡೆಯುವ ಸ್ಥಳದಿಂದ ಬಹಳಷ್ಟು ದೂರದಿಂದಲೇ ವಾಹನ ಪ್ರವೇಶವನ್ನು ನಿಷೇಧಿಸಲಾಗಿದೆ.
ಪ್ರಯಾಣದ ಸಂಕಷ್ಟದಿಂದ ಜನರು ಕೂಡ ಆಕ್ರೋಶಿತರಾಗಿದ್ದು, ಇನ್ನಷ್ಟು ಉತ್ತಮ ವ್ಯವಸ್ಥೆ ಮಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಮಂದಿ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಬಿದ್ದು ಅನುಭವಿಸಿದ ಕರಾಳ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಕುಟುಂಬವೊಂದು ಬರೀ ನಾಲ್ಕು ಕಿ.ಮೀ. ಪ್ರಯಾಣಕ್ಕೆ ಬರೋಬ್ಬರಿ 24 ತಾಸು ಬೇಕಾಯಿತು ಎಂದು ಬರೆದುಕೊಂಡಿದೆ.
ಅನೇಕ ಮಂದಿ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಬಿದ್ದಾಗ ಸರಿಯಾಗಿ ಆಹಾರ, ಶೌಚಾಲಯ ಸಿಗದೆ ಒದ್ದಾಡಿದ ಬಗ್ಗೆ ಬರೆದುಕೊಂಡಿದ್ದಾರೆ.
ಸಮಾಜವಾದಿ ಪಾರ್ಟಿ ಮುಖಂಡ ಅಖಿಲೇಶ್ ಯಾದವ್ ಕುಂಭಮೇಳದ ಟ್ರಾಫಿಕ್ ನಿಯಂತ್ರಣ ವ್ಯವಸ್ಥೆ ಅತ್ಯಂತ ಕಳಪೆಯಾಗಿದೆ ಎಂದು ಟೀಕಿಸಿದ್ದಾರೆ. ಕುಂಭಮೇಳ ಪ್ರವೇಶದ 30 ಕಿ.ಮೀ. ದೂರದಿಂಲೇ ಜನರು ಇಳಿದು ನಡೆಯಬೇಕಾಗಿದೆ. ಟ್ರಾಫಿಕ್ ಜಾಮ್ ಅಗುವ ಬಗ್ಗೆ ಗೊತ್ತಿದ್ದರೂ ಉತ್ತರ ಪ್ರದೇಶ ಸರಕಾರ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ. ವಿಐಪಿಗಳಿಗೆ ಬೇಗ ಪ್ರವೇಶ ಸಿಗುತ್ತದೆ. ಜನಸಾಮಾನ್ಯರು ಮಾತ್ರ ನಡೆದುಕೊಂಡೇ ಹೋಗುವ ಅನಿವಾರ್ಯತೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.
ರೈಲು ನಿಲ್ದಾಣ ಬಂದ್
ಪ್ರಯಾಗ್‌ರಾಜ್ ಸಂಗಮ ರೈಲು ನಿಲ್ದಾಣವನ್ನು ಭಕ್ತರ ದಟ್ಟಣೆ ನಿಭಾಯಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಫೆ.14ರ ತನಕ ಮುಚ್ಚಲಾಗದೆ. ರೈಲುಗಳಲ್ಲಿ ಬಂದು ಇಳಿಯುವ ಭಕ್ತರಿಗೆ ರೈಲು ನಿಲ್ದಾಣದಿಂದ ಹೊರಗೆ ಬರಲು ಸಾಧ್ಯವಾಗದಷ್ಟು ಹೊರಗೆ ಭಕ್ತರ ದಟ್ಟಣೆಯಿದೆ. ಹೀಗಾಗಿ ಫೆ.14ರ ತನಕ ರೈಲು ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ರೈಲ್ವೆ ವಿಭಾಗೀಯ ಪ್ರಬಂಧಕರು ತಿಳಿಸಿದ್ದಾರೆ.