ಪುತ್ತೂರು: ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದಲ್ಲಿ ವೀರಮಂಗಲ ರೈಸಿಂಗ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ 27ನೇ ವರ್ಷದ 58 ಕೆ.ಜಿ.ವಿಭಾಗದ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ಭಾನುವಾರ ರಾತ್ರಿ ವೀರಮಂಗಲ ಶಾಲಾ ಮೈದಾನದಲ್ಲಿ ನಡೆಯಿತು.
ನರಿಮೊಗರು ಗ್ರಾಮ ಪಂಚಾಯತ್ ಸದಸ್ಯೆ ವಸಂತಿ ವಿ. ಗಂಡಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಮ್ಯಾಟ್ ಕಬಡ್ಡಿ ವೀರಮಂಗಲದ ಹಳ್ಳಿಯಲ್ಲಿ ನಡೆದಿರುವುದು ಕಲ್ಪನೆಗೆ ಮೀರಿದ ಸಂಗತಿಯಾಗಿದೆ : ಸೀತಾರಾಮ ಕೇವಳ
ಸಂಪನ್ಮೂಲ ವ್ಯಕ್ತಿಯಾಗಿ ಜೆಸಿಐ ಇಂಡಿಯಾ ರಾಷ್ಟ್ರೀಯ ತರಬೇತುದಾರ ಸೀತರಾಮ ಕೇವಳ ಮಾತನಾಡಿ, ಅತ್ಯಂತ ಸುವ್ಯವಸ್ಥಿತವಾಗಿ ಅಂತರಾಷ್ಟ್ರೀಯ ಮಟ್ಟದ ಮಾದರಿಯಲ್ಲಿ ನಡೆಯುವ ಮ್ಯಾಟ್ ಕಬಡ್ಡಿ ವೀರಮಂಗಲದ ಹಳ್ಳಿಯಲ್ಲಿ ನಡೆಯುವುದು ಕಲ್ಪನೆಗೆ ಮೀರಿದ ಸಂಗತಿಯಾಗಿದೆ. ನಗರ ಪ್ರದೇಶದ ಶಾಲೆಗಳಿಗೆ ಉತ್ತೇಜನ ನೀಡುವ ಮಕ್ಕಳು ಹಾಗೂ ಪೋಷಕರು ಇರುವ ಈ ಕಾಲಘಟ್ಟದಲ್ಲಿ, ಹಳ್ಳಿಯಲ್ಲಿರುವ ಶಾಲೆಯನ್ನು ಉತ್ಕೃಷ್ಟಗೊಳಿಸಲು ಪರಿಪೂರ್ಣವಾದ ಶಿಕ್ಷಣದ ಅಗತ್ಯವಿದೆ. ಆಡಳಿತ ಮಂಡಳಿ, ಶಾಲಾ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ , ಹಾಗೂ ಊರಿನವರ ತಂಡ ಉತ್ತಮ ಶಾಲೆಯಾಗಿ ರೂಪಿಸುವಲ್ಲಿ ಸಂಕಲ್ಪಹೊತ್ತಿದ್ದು ಶ್ರೇಷ್ಠವಾಗಿದೆ. ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಶಾಲೆಯ ಜೊತೆ ಕೂಡಿಕೊಂಡು ಸಮಾನ ಚಿಂತನೆಯನ್ನಿಟ್ಟುಕೊಂಡು ಕ್ರಿಯಾತ್ಮಕವಾದ ಯೋಜನೆ, ಸಕರಾತ್ಮಕವಾದ ಭಾವನೆಯ ಮೂಲಕ ಕೆಲಸವನ್ನು ಮಾಡಿದರೆ ಪಿ.ಎಂ. ಶ್ರೀ ಶಾಲೆ ವಿಶ್ವವಿಖ್ಯಾತಗೊಳ್ಳಲು ಸಾಧ್ಯ. ಕ್ರೀಡೆ ನಮ್ಮ ಪ್ರಪಂಚದಲ್ಲಿರುವು ಒಳ್ಳೆಯ ಸಂಗತಿಯಾಗಿದೆ. ಯಾವುದೇ ಕಾಯ ಮಾಡುವುದಾದ್ರು ಜಾತಿ, ಧರ್ಮಗಳಿರುತ್ತವೆ, ಆದರೆ ಕ್ರೀಡೆಯಲ್ಲಿ ಜಾತಿ, ಧರ್ಮವೆಂಬುವುದಿಲ್ಲ. ಕ್ರೀಡೆ ಎನ್ನುವುದು ಮನುಷ್ಯ-ಮನುಷ್ಯರ ನಡುವೆ ಇರುವ ಬೇದ-ಭಾವವನ್ನು ತೊಡೆದು ಹಾಕುವ ಔಷಧಿಯಾಗಿದೆ ಎಂದು ಹೇಳಿದರು.
ನಾವು ಇಂದು ಏನು ಗಳಿಸಿದ್ದೇವೋ ಅದಕ್ಕೆ ವೀರಮಂಗಲ ಪಿಎಂಶ್ರೀ ಶಾಲೆ ಕಾರಣ : ವಸಂತ ವೀರಮಂಗಲ
ಮುಖ್ಯ ಅತಿಥಿಯಾಗಿ ವೀರಮಂಗಲ ಪಿ.ಎಂ.ಶ್ರೀ ಶಾಲೆ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ವಸಂತ ವೀರಮಂಗಲ ಮಾತನಾಡಿ, ಈ ಶಾಲೆಯಲ್ಲಿ ಕಲಿತು ಹೋದ ಹಿರಿಯ ವಿದ್ಯಾರ್ಥಿಗಳು ಅನೇಕ ಸಾಧನೆಯ ಮೆಟ್ಟಿಲೇರಿದ್ದಾರೆ. ಇದಕ್ಕೆ ಭಗವಾನ್ ಶ್ರೀ ಕೃಷ್ಣನ ಗೀತಸಾರದಂತೆ ನೀನು ಏನು ಪಡೆದಿದ್ದಿಯೋ ಅದು ಇಲ್ಲಿಂದಲೇ ಪಡೆದದ್ದು, ನೀನು ಏನು ಗಳಿಸಿದ್ದಿಯೋ ಅದು ಇಲ್ಲಿಂದಲೇ ಗಳಿಸಿದ್ದು. ಉತ್ತಮ ಹಂತಕ್ಕೆ ತಲುಪಲು ಕಾರಣ ಊರು ವೀರಮಂಗಲ. ಏನು ಗಳಿಸಿದ್ದೇವೋ ಅದಕ್ಕೆ ಕಾರಣ ಕಲಿತ ಪ್ರಾಥಮಿಕ ಶಾಲೆ. ಹಲವು ಹಿರಿಯ ವಿದ್ಯಾರ್ಥಿಗಳು ಕೊಡುಗೆಗಳಲ್ಲಿ ಹೆಸರುಗಳಿವೆ. ಈ ಹೆಸರನ್ನು ಉಳಿಸಿಕೊಂಡು. ಪಿ.ಎಂ.ಶ್ರೀ ಶಾಲೆಯ ಅಭಿವೃದ್ದಿಗಾಗಿ ಶ್ರಮಿಸೋಣ ಎಂದು ಹೇಳಿದರು.
ವೀರಮಂಗಲ ಊರು ಸೌಹಾರ್ದತೆಗೆ ಹೆಸರು ಪಡೆದ ಊರು ಎಂದು ಗುರುತಿಸಿಕೊಂಡಿದೆ : ಅನೀಸ್ ಕೌಸರಿ
ಕರ್ನಾಟಕ ಇಸ್ಲಾಮಿಕ್ ಸೆಂಟರ್ ಪ್ರೊಫೆಸರ್ ಅನೀಸ್ ಕೌಸರಿ ಮಾತನಾಡಿ, ಧಾರ್ಮಿಕ ಕ್ಷೇತ್ರದಲ್ಲಿ ಭಾಗವಹಿಸುವುದು ತೀರಾ ಕಡಿಮೆ. ಮುಸಲ್ಮಾನರಿಗೆ ಧಾರ್ಮಿಕ ಕಾರ್ಯಕ್ರಮ ನಡೆಸಲು ಮಸೀದಿ ಇದೆ. ಹಿಂದು ಸಹೋದರರಿಗೆ ಧಾರ್ಮಿಕ ಕಾರ್ಯಕ್ರಮ ನಡೆಸಲು ದೇವಸ್ಥಾನಗಳಿವೆ. ಆದರೆ ಹಿಂದೂ, ಮುಸಲ್ಮಾನರು ವರ್ಷದಲ್ಲಿ ಒಟ್ಟು ಸೇರಲು ಅವಕಾಶವಿರುವುದು ಇದೇ ಕಾರ್ಯಕ್ರಮವಾಗಿದೆ. ವಾಸ್ತವಿಕ ಸ್ಥಿತಿಗತಿಯಲ್ಲಿ ನಮ್ಮ ಊರು, ನಮ್ಮ ಪರಿಸರ, ನಮ್ಮ ನೆರೆಹೊರೆ ಎಂದು ಸೌಹಾರ್ದತೆಯಿಂದ ಬದುಕಿದ್ದೇವೆ. ವೀರಮಂಗಲ ಗ್ರಾಮ ಸೌಹಾರ್ದತೆಗೆ ಹೆಸರು ಪಡೆದ ಗ್ರಾಮ ಎಂದು ಗುರುತಿಸಿಕೊಂಡಿದೆ. ತಮ್ಮ ಭಾವನೆಗಳಿಗೆ., ಭವಿಷ್ಯಗಳಿಗೆ ರೆಕ್ಕೆಗಳನ್ನು ಕೊಟ್ಟದ್ದು ಪಿ.ಎಂ.ಶ್ರೀ ವಿದ್ಯಾಲಯ. ಯಾವ ಧರ್ಮಗಳು ದ್ವೇಷವನ್ನು ಕಳಿಸಿಲ್ಲ , ಭಾರತ ದೇಶ ವೈವಿದ್ಯತೆಯನ್ನು ಕಂಡಿದೆ. ನಮ್ನಲ್ಲಿರುವ ಧರ್ಮಗಳಲ್ಲಿ, ಜಾತಿಗಳಲ್ಲಿ ಅದರದ್ದೆ ಆದ ಸಂಪ್ರದಾಯಗಳನ್ನು ಒಳಗೊಂಡಿದೆ. ಆದರೆ ಒಂದು ವಿಚಾರದಲ್ಲಿ ಸಮಾನ ಆಶಯವನ್ನು ಹೇಳಿದ್ದು, ಮನುಷ್ಯತ್ವವನ್ನು ತಿಳಿಸಿದೆ. ಈ ಶಾಲೆಯನ್ನು ಊರಿನವರು, ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಬೆಳೆಸುವಲ್ಲಿ ಕೈಜೋಡಿಸೋಣ ಎಂದು ಹೇಳಿದರು.
ಪಂದ್ಯಾಟ ಕೇವಲ ರೈಸಿಂಗ್ ಸ್ಟಾರ್ ಆಗದೆ ರೈಸಿಂಗ್ ಫೈವ್ ಸ್ಟಾರ್ ಆಗಿದೆ : ತಾರನಾಥ ಸವಣೂರು
ಪಿ.ಎಂ. ಶ್ರೀ ಶಾಲೆಯ ಮುಖ್ಯ ಶಿಕ್ಷಕ ತಾರನಾಥ ಸವಣೂರು ಮುಖ್ಯ ಅತಿಥಿಯಾಗಿ ಮಾತನಾಡಿ, ಪಿ.ಎಂ. ಶ್ರೀ ಶಾಲೆಗೆ ಕೊಡುಗೆ ನೀಡಿದ ಹಿರಿಯ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳ ಸಂಘದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಾಗಿ ಆಯ್ಕೆಗೋಡವರಿಗೆ ಶುಭ ಹಾರೈಸಿದರು. ಇದು ಕೇವಲ ರೈಸಿಂಗ್ ಸ್ಟಾರ್ ಆಗದೆ, ರೈಸಿಂಗ್ ಫೈವ್ ಸ್ಟಾರ್ ಎಂಬುವುದಾಗಿದೆ. ಈ ತಂಡದಲ್ಲಿ ಸಲೀಮ್, ಫಾರೂಕ್, ನಾಗೇಶ್, ಮಹಾಬಲ, ಅಶ್ವತ್ ಈ ಐದು ಮಂದಿ ಸೇರಿ ಜನರನ್ನು ಒಟ್ಟುಗೂಡಿಸಿ ಕೆಲಸ ಮಾಡಿದ್ದಾರೆ ಎಂದು ಹೇಳಿದ ಅವರು ಸ್ಪೋರ್ಟ್ಸ್ ನಲ್ಲಿ ಭಾಗವಹಿಸುವ ಆಟಗಾರರಿಗೆ ಶುಭಹಾರೈಸಿದರು.
ಯಾವುದೇ ಧರ್ಮ- ಪಕ್ಷದವರಿಗೆ ಬೇದವಿಲ್ಲದೆ ಸರ್ವ ರೀತಿಯಲ್ಲಿ ಧಾರೆ ಎಳೆಯುವುದು ವಿದ್ಯಾದಾನ : ವಸಂತ ಮೂಲ್ಯ
ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ವಸಂತ ಮೂಲ್ಯ ಮಾತನಾಡಿ, ಕಬಡ್ಡಿ ಆಡಬೇಕಾದರೆ ನೈಪುಣ್ಯತೆ ಹಾಗೂ ಚಾಕಚಕ್ಯತೆ ಇರಬೇಕು. ಕಬಡ್ಡಿ ಆಡಲು ದೇಹವಿದ್ದರೆ ಸಾಕಾಗದೆ ಮೈಯೆಲ್ಲಾ ಕಣ್ಣಾಗಿರಬೇಕು. ಪ್ರತಿಷ್ಟಿತ ವೀರಮಂಗಲ ಶಾಲೆ ರಾಜ್ಯದಲ್ಲಿ ಪುತ್ತೂರು ತಾಲೂಕಿನಲ್ಲಿ ಗುರುತಿಸಲ್ಪಡುವ ಈ ಜಾಗ ಪವಿತ್ರವಾಗಿದೆ. ಪಕ್ಷ, ಧರ್ಮವನ್ನು ಬದಿಗೊತ್ತಿ ಬರುವುದು ವಿದ್ಯಾದೇಗುಲದಲ್ಲಿ. ಹಾಗಾಗಿ ಸರ್ವಧರ್ಮ ದೇಗುಲವೆಂದರೆ ವಿದ್ಯಾಲಯ. ಯಾವುದೇ ಧರ್ಮ- ಪಕ್ಷದವರಿಗೆ ಬೇದವಿಲ್ಲದೆ ಸರ್ವ ರೀತಿಯಲ್ಲಿ ಧಾರೆ ಎಳೆಯುವುದು ವಿದ್ಯಾದಾನ ಎಂದು ಹೇಳಿದರು.
ಕೆಟ್ಟ ಹೆಸರು ಬಂತು ಎಂದು ಹಿಂದುಳಿದರೆ ನಾವು ಸಾಧಿಸಬೇಕಾಗಿದ್ದನ್ನು ಸಾಧಿಸಲು ಅಸಾಧ್ಯ : ದಾಮೋದರ್ ಕುಲಾಲ್
ಪುತ್ತೂರು ಶ್ರೀ ಮಾತಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ್ ಕುಲಾಲ್ ಮುಖ್ಯ ಅಥಿತಿಯಾಗಿ ಮಾತನಾಡಿ, ಏನೇ ಕಾರ್ಯಕ್ರಮ ಮಾಡಿದರು ಒಳ್ಳೆಯ ಮಾತು ಹಾಗೂ ಕೆಟ್ಟ ಮಾತುಗಳನ್ನು ಕೇಳುತ್ತೇವೆ. ಕೆಟ್ಟ ಹೆಸರು ಬಂತು ಎಂದು ಹಿಂದುಳಿದರೆ ನಾವು ಸಾಧಿಸಬೇಕಾಗಿದ್ದನ್ನು ಸಾಧಿಸಲು ಅಸಾಧ್ಯ. ಅಂತಹ ಮಾತಗಳನ್ನು ಬದಿಗಿಟ್ಟು ಸೇವಾಕಾರ್ಯಗಳಲ್ಲಿ ಮುಂದುವರಿಬೇಕು ಮುಂದೊಂದು ದಿನ ಉತ್ತಮ ಫಲ ನಮ್ಮದಾಗುತ್ತದೆ ಎಂದು ಹೇಳಿದರು.
ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಹೇಳಿಕೊಡುವ ಜಾಗವೆಂದರೆ ಶಾಲೆ. ಇದನ್ನು ಕಲಿತವರು ನಾವು ಧನ್ಯರು : ಗೋಪಾಲಕೃಷ್ಣ ವೀರಮಂಗಲ
ವೀರಮಂಗಲ ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನ ಆನಾಜೆಯ ಅಧ್ಯಕ್ಷ ಗೋಪಾಲಕೃಷ್ಣ ವೀರಮಂಗಲ ಮಾತನಾಡಿ, ಒಂದು ಊರು ಹೇಗೆ ಇದೆ ಎಂದು ತಿಳಿಯಲು, ವಿದ್ಯಾದೇಗುಲ ಮತ್ತು ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನು ಕಂಡಾಗ ಊರ ಪರಿಸ್ಥಿತಿ ತಿಳಿಯುತ್ತದೆ. ನಾವು ಕಲಿತ ಋಣ ಕೊನೆ ತನಕವಿರುತ್ತದೆ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಹೇಳಿಕೊಡುವ ಜಾಗವೆಂದರೆ ಶಾಲೆ. ಇದನ್ನು ಕಲಿತವರು ನಾವು ಧನ್ಯರು. ನಾವು ಕಲಿತ ವಿದ್ಯೆಯನ್ನು ಆರೋಗ್ಯವಿರುವ ತನಕ ಶಾಲಾ ಸೇವೆಯನ್ನು ಮಾಡಿ ಋಣ ತೀರಿಸಬೇಕು ಎಂದು ಹೇಳಿದರು.
ಜಾತಿ, ಧರ್ಮದವರನ್ನು ಒಟ್ಟು ಸೇರಿಸುವ ಕಾರ್ಯಕ್ರಮ ಎಂದರೆ ರೈಸಿಂಗ್ ಸ್ಪೋರ್ಟ್ಸ್ : ಬಾಬು ಶೆಟ್ಟಿ ವೀರಮಂಗಲ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನರಿಮೊಗರು ಗ್ರಾಮ ಪಂಚಾಯಿತಿ ಸದಸ್ಯ ಬಾಬು ಶೆಟ್ಟಿ ವೀರಮಂಗಲ ಮಾತನಾಡಿ, ಅನೇಕ ಕಬಡ್ಡಿ ಆಟಗಾರರು ಆಡಿದ ಶಾಲಾ ಮೈದಾನ ಇದಾಗಿದೆ. ಜಾತಿ, ಧರ್ಮದವರನ್ನು ಒಟ್ಟು ಸೇರಿಸುವ ಕಾರ್ಯಕ್ರಮ ಎಂದರೆ ರೈಸಿಂಗ್ ಸ್ಪೋರ್ಟ್ಸ್ ಎಂದರೆ ತಪ್ಪಗಲಾರದು. ಈ ವಿದ್ಯಾ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಕೈ ಜೊಡಿಸೋಣ ಎಂದು ಹೇಳಿದ ಅವರು ಕಬಡ್ಡಿಯಲ್ಲಿ ಭಾಗವಹಿಸುವ ಆಟಗಾರರಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಅನೇಕ ಕ್ಷೇತ್ರದಲ್ಲಿ ಸಾಧಿಸಿದ ಕ್ಯಾಪ್ಟನ್ ಮುರಳಿಕೃಷ್ಣ, ಮೋಹನ್ ಕುಮಾರ್ ಪಲ್ಲತ್ತೋಡಿ, ಜಿಲ್ಲಾ ಮಟ್ಟದ ಕಬ್ಬಡಿ ಆಟಗಾರ್ತಿ ಕೃತಿಕಾ ಎ.ಜೆ. ಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಕ್ಯಾಪ್ಟನ್ ಮುರಳಿಕೃಷ್ಣ ಶುಭಹಾರೈಸಿದರು. ಹಿರಿಯ ವಿದ್ಯಾರ್ಥಿ ಸಂಘದ ಪೂರ್ವಧ್ಯಕ್ಷ ವಿ. ಮಹಾಬಲ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು.
ಹಿರಿಯ ವಿದ್ಯಾರ್ಥಿ ಸಂಘದ ಪೂರ್ವಾಧ್ಯಕ್ಷ ವಿ. ಮಹಾಬಲ ಶೆಟ್ಟಿ ನೂತನ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ವರ್ಷ, ಶ್ರೀದೇವಿ, ಚಿಂತನಾ ಪ್ರಾರ್ಥನೆ ಹಾಡಿದರು. ಫಾರೂಕ್ ಆನಾಜೆ ಸ್ವಾಗತಿಸಿದರು.