ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಮಿಶ್ರಣ : ಎಸ್‌ಐಟಿಯಿಂದ ನಾಲ್ವರ ಬಂಧನ

ಪ್ರಸಿದ್ಧ ಡೈರಿಗಳ ಮಾಲೀಕರನ್ನು ಬಂಧಿಸಿ ವಿಚಾರಣೆ

ತಿರುಪತಿ: ಹಿಂದೂಗಳ ಪವಿತ್ರ ಯಾತ್ರಾತಾಣ ತಿರುಪತಿ ತಿರುಮಲದಲ್ಲಿ ನಡೆದಿದೆ ಎನ್ನಲಾದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತನಿಖೆ ನಡೆಸಿದ್ದ ಹೈದರಾಬಾದ್ ವಿಭಾಗದ ಜಂಟಿ ನಿರ್ದೇಶಕ ವೀರೇಶ್ ಪ್ರಭು, ವಿಶಾಖಪಟ್ಟಣಂ ಸಿಬಿಐ ಎಸ್ಪಿ ಮುರಳೀರಾಂಬ, ವಿಶಾಖಪಟ್ಟಣಂ ಡಿಐಜಿ ಗೋಪಿನಾಥ್ ಜೆಟ್ಟಿ, ಗುಂಟೂರು ಐಜಿ ಸರ್ವಶ್ರೇಷ್ಠಿ ತ್ರಿಪಾಠಿ ಮತ್ತು ಎಫ್‌ಎಸ್‌ಎಸ್‌ಎಐ ಅಧಿಕಾರಿ ಸತ್ಯಕುಮಾರ್ ಪಾಂಡಾ ನೇತೃತ್ವದ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದೆ.

ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್ ಮತ್ತು ಪೊಮಿಲ್ ಜೈನ್ (ರೂರ್ಕಿ, ಉತ್ತರಾಖಂಡ), ವೈಷ್ಣವಿ ಡೈರಿಯ (ಪೂನಂಬಾಕ್ಕಂ) ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ಎಆರ್ ಡೈರಿ (ದುಂಡಿಗಲ್) ಎಂಡಿ ರಾಜು ರಾಜಶೇಖರನ್ ಲಡ್ಡು ಪ್ರಸಾದ ಕಲಬೆರಕೆ ಹಗರಣದಲ್ಲಿ ಬಂಧಿತರಾಗಿರುವ ಆರೋಪಿಗಳಾಗಿದ್ದಾರೆ. ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ಅಧಿಕಾರಿಗಳು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತನಿಖಾ ತಂಡ ತಿಳಿಸಿದ್ದಾರೆ.
ತಿರುಪತಿಗೆ ತುಪ್ಪ ಪೂರೈಕೆಯಲ್ಲಿ ಪಾಲಿಸಬೇಕಾದ ನಿಯಮಗಳ ಉಲ್ಲಂಘನೆಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಟೆಂಡರ್‌ ಪಡೆಯಲು ನಕಲಿ ದಾಖಲೆಗಳು ಮತ್ತು ಸ್ಟ್ಯಾಂಪ್‌ಗಳನ್ನು ಬಳಸಲಾಗಿದೆ. ವೈಷ್ಣವಿ ಡೈರಿಯು ಭೋಲೆ ಬಾಬಾ ಡೈರಿಯ ತುಪ್ಪ ಪೂರೈಕೆಯ ನಿಯಮಗಳನ್ನು ತಿರುಚಿರುವುದು ಬೆಳಕಿಗೆ ಬಂದಿದೆ. ತುಪ್ಪ ಪೂರೈಕೆಯಲ್ಲಿ ಹಲವು ವ್ಯತ್ಯಾಸಗಳು ಮತ್ತು ಸುಳ್ಳು ದಾಖಲೆಗಳನ್ನು ನೀಡಿರುವುದು ಕಂಡುಬಂದಿವೆ.
ಇತ್ತೀಚೆಗಷ್ಟೇ ಈ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ನಾಲ್ವರನ್ನು ಬಂಧಿಸಿತ್ತು. ಇವುಗಳಲ್ಲಿ ಎಆರ್ ಡೈರಿ, ಪರಾಗ್ ಫುಡ್ಸ್, ಪ್ರೀಮಿಯರ್ ಅಗ್ರಿ ಫುಡ್ಸ್ ಮತ್ತು ಆಲ್ಫಾ ಮಿಲ್ಕ್ ಫುಡ್ಸ್ ಸೇರಿವೆ.
ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ನೀಡುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಮಿಶ್ರಣ ಮಾಡಲಾಗಿದೆ ಎಂಬ ಅಘಾತಕಾರಿ ಅಂಶ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಹಿಂದೂಗಳ ನಂಬಿಕೆಗೆ ಅಪಚಾರ ಮಾಡಲಾಗಿದೆ ಎಂದು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ತಿರುಮಲದಲ್ಲಿ ಪ್ರಸಾದದ ರೂಪದಲ್ಲಿ ನೀಡುವ ಲಡ್ಡುವಿನಲ್ಲಿ ಹಸುವಿನ ಕೊಬ್ಬು ಮತ್ತು ಪ್ರಾಣಿಗಳ ತ್ಯಾಜ್ಯ ಮಿಶ್ರಣ ಮಾಡಲಾಗಿದೆ ಎಂದು ಚಂದ್ರಬಾಬು ನಾಯ್ಡು ಸರ್ಕಾರ ಆರೋಪಿಸಿತ್ತು. ಅವರು ಈ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ತಿರುಮಲ ಲಡ್ಡುವಿನ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top