ಬಜೆಟ್‌ನಲ್ಲಿ ಘೋಷಿಸುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಮನವಿ
ಬೆಂಗಳೂರು: ರಾಜ್ಯದ ಎರಡನೇ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವನ್ನು ಮಂಗಳೂರಿನಲ್ಲಿ ಸ್ಥಾಪಿಸುವಂತೆ ರಾಜ್ಯ ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಮೊಯ್ಲಿ, ಬೆಂಗಳೂರಿನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕಾನೂನು ಶಾಲೆ ಎನ್‌ಎಲ್‌ಎಸ್‌ಐಯು ಸ್ಥಾಪಿಸಲು ಕ್ರಮಗಳ ಕೈಗೊಂಡಿದ್ದೆ. ಇದು ಅತ್ಯಂತ ಯಶಸ್ವಿ ಪ್ರಯೋಗವಾಗಿದ್ದು, ಇಂದು ಭಾರತದಲ್ಲಿ 27 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿವೆ. ಕೆಲವು ರಾಜ್ಯಗಳು ಒಂದಕ್ಕಿಂತ ಹೆಚ್ಚು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿವೆ, ರಾಜ್ಯದ 2ನೇ ಕಾನೂನು ವಿಶ್ವವಿದ್ಯಾಲಯವನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕಿದ್ದು, ಮುಂಬರುವ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಎರಡನೇ ಎನ್‌ಎಲ್‌ಎಸ್‌ಐಯು ಸ್ಥಾಪಿಸುವುದರಿಂದ ಕರ್ನಾಟಕದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ರಕ್ಷಿಸಿದಂತಾಗುತ್ತದೆ. ಅಲ್ಲದೆ, ತಂತ್ರಜ್ಞಾನ ಮತ್ತು ಕಾನೂನು; ಸೈಬರ್ ಭದ್ರತೆ; ಎಐ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ಕಾನೂನು, ನಿರ್ವಹಣೆ, ತಂತ್ರಜ್ಞಾನ, ವೈದ್ಯಕೀಯ ಮತ್ತು ಸಾರ್ವಜನಿಕ ನೀತಿಯಲ್ಲಿ ನವೀನ ಕೋರ್ಸ್‌ಗಳನ್ನು ಸಂಯೋಜಿಸಲು ಸಂಸ್ಥೆಯನ್ನು ಸಕ್ರಿಯಗೊಳಿಸಲು (ರಾಷ್ಟ್ರೀಯ ಕಾನೂನು ಮತ್ತು ಸಾರ್ವಜನಿಕ ನೀತಿ ವಿಶ್ವವಿದ್ಯಾಲಯ) ಸ್ವತಂತ್ರ ಕಾನೂನಿನ ಅಗತ್ಯವಿದೆ ಎಂದೂ ತಿಳಿಸಿದ್ದಾರೆ.
2025-26ರ ಹಣಕಾಸು ವರ್ಷದಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಾಧ್ಯವಾದರೆ, ಮಂಗಳೂರಿನಲ್ಲಿ ಎರಡನೇ ಕಾನೂನು ಶಾಲಾ ವಿಶ್ವವಿದ್ಯಾಲಯ 2026-27ರ ಹಣಕಾಸು ವರ್ಷಕ್ಕೆ ಸ್ಥಾಪನೆಯಾಗಲಿದೆ ಎಂದು ಹೇಳಿದ್ದಾರೆ.