ಪುತ್ತೂರು: ತಾಲೂಕು ಒಕ್ಕಲಿಗ ಗೌಡ ಮಹಿಳಾ ಸಂಘದಿಂದ ಕೆಡ್ಡಸ ಹಬ್ಬದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಈಶ್ವರಮಂಗಲ ವಲಯದ ಕಾವು ಸಂಜೀವ ಗೌಡರ ಮನೆಯಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆ ವಾರಿಜಾ ಬೆಳಿಯಪ್ಪ ಗೌಡ ಮಾತನಾಡಿ, ನೆಲ ಅಗೆಯುವುದು ನಿಷೇಧ ಎಂಬ ಅರ್ಥವನ್ನು ಕೊಡುವ ಕೆಡ್ಡಸ ಮೂರು ದಿನಗಳ ಆಚರಣೆಯ ಹಬ್ಬವಾಗಿದೆ. ಪ್ರಕೃತಿ ಹೆಣ್ಣಾಗಿರುವುದರಿಂದ ಆಕೆ ವರ್ಷಕ್ಕೊಮ್ಮೆ ಬಹಿಷ್ಠೆಯಾಗುವ, ಭೂಮಿತಾಯಿ ರಜಸ್ವಲೆಯಾಗುವ ಹಬ್ಬವೇ ಕೆಡ್ಡಸ, ಈ ಹಬ್ಬ ಫೆನ್ನಿ (ಪೊಯಿಂತೆಲ್) 27ನೇ ದಿನದಿಂದು ಸಂಜೆ ಮೊದಲ್ಗೊಂಡು ಮಯಿ ತಿಂಗಳ ಸಂಕ್ರಮಣದ ವರೆಗೆ ಆಚರಿಸಲ್ಪಡುತ್ತಿದೆ. ಈ ಮೂರು ದಿನ ಕೃಷಿ ಕಾರ್ಯದಲ್ಲಿ ತೊಡಗಿಸಿ ಭೂಮಿ ತಾಯಿಯನ್ನು ಘಾಸಿಗೊಳಿಸಿದರೆ ಆಕೆ ಬಂಜೆಯಾಗುತ್ತಾಳೆ ಎಂಬ ಪ್ರತೀತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಅಭಿಪ್ರಾಯ ಪಟ್ಟರು.

ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಹಾಗೂ ಸಂಜೀವ ಗೌಡರು ಜಂಟಿಯಾಗಿ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಚಂಚಲ ಲೋಕೇಶ್ ಗೌಡ ಚಾಕೋಟೆ ಕೆಡ್ಡಸ ಹಬ್ಬದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಕಲಾವತಿ ಸಂಜೀವ ಗೌಡ ಪಟ್ಲಡ್ಕ ಕೆಡ್ಡದ ಆಚರಣೆಯ ಪ್ರಾತ್ಯಕ್ಷಿಕೆ ನಡೆಸಿ ಅದರ ವಿವರಣೆ ನೀಡಿದರು.
ಮಹಿಳಾ ಸಂಘದ ಉಪಾಧ್ಯಕ್ಷ ನವೀನಾ ಬಿ.ಡಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಕೋಶಾಧಿಕಾರಿ ಶಿವರಾಮ ಮತಾವು, ಕುಂಬ್ರ ವಲಯ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಲೋಕೇಶ್ ಚಾಕೋಟೆ ಶುಭ ಹಾರೈಸಿದರು. ತಾಲೂಕು ಮಹಿಳಾ ಸಂಘದ ಕಾರ್ಯದರ್ಶಿ ಸಂಧ್ಯಾ ಶಶಿಧರ್ ವಂದಿಸಿದರು. ಖಜಾಂಚಿ ರತ್ನಾ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.