ರೋಮಾಂಚನಕಾರಿ ವೈಮಾನಿಕ ಪ್ರದರ್ಶನ
ಬೆಂಗಳೂರು: ಬೆಂಗಳೂರಿನಲ್ಲಿ ನಾಳೆಯಿಂದ 15ನೇ ಆವೃತ್ತಿಯ ಏರೋ ಇಂಡಿಯಾ ಶೋ ಆರಂಭವಾಗಲಿದೆ. ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಈ ಬಾರಿ ಹಲವು ದಾಖಲೆಗಳ ನಿರೀಕ್ಷೆಗಳನ್ನು ಹುಟ್ಟಿಸಿದೆ.
ರನ್ ಟು ಎ ಬಿಲಿಯನ್ ಆಪರ್ಚುನಿಟೀಸ್ ಎಂಬ ಧ್ಯೇಯದೊಂದಿಗೆ 5 ದಿನ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಯಲಹಂಕ ವಾಯುನೆಲೆ ಸಿದ್ಧವಾಗಿದೆ. ಫೆಬ್ರವರಿ 10ರಿಂದ 14ರವರೆಗೆ ನಡೆಯಲಿರುವ ಏರ್ ಶೋಗೆ ದೇಶ, ವಿದೇಶದ ಗಣ್ಯರು ಆಗಮಿಸಲಿದ್ದಾರೆ. ದೇಶ, ವಿದೇಶದ ವಾಯುಪಡೆಯ ವಿಮಾನಗಳು ಬಾನಂಗಳದಲ್ಲಿ ಮೋಡಿ ಮಾಡಲು ರೆಡಿಯಾಗಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏರ್‌ಶೋ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಮೊದಲ ಮೂರು ದಿನ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರ ದಿನಗಳಾಗಿರುತ್ತವೆ. 13 ಮತ್ತು 14ರಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಏರೋಸ್ಪೇಸ್ ಮತ್ತು ರಕ್ಷಣೆಯಲ್ಲಿ ಸ್ವದೇಶಿಕರಣ ಉತ್ತೇಜಿಸುವುದು, ಅತ್ಯಾಧುನಿಕ ತಂತ್ರಜ್ಞಾನಗಳು, ಉತ್ಪನ್ನಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಈಗಾಗಲೇ 700ಕ್ಕೂ ಅಧಿಕ ಪ್ರದರ್ಶಕರು ನೋಂದಣಿ ಮಾಡಿಕೊಂಡಿದ್ದಾರೆ.