ರಾಯ್‌ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ 12 ನಕ್ಸಲರು ಹತರಾಗಿದ್ದಾರೆ. ಇದರೊಂದಿಗೆ ನಕ್ಸಲ್ ನಿಗ್ರಹ ಹೋರಾಟದಲ್ಲಿ ಭದ್ರತಾ ಪಡೆಗಳಿಗೆ ಮತ್ತೊಂದು ಜಯ ಲಭಿಸಿದೆ. ಕಳೆದ ವಾರವಷ್ಟೇ ಎಂಟು ನಕ್ಸಲರು ಗುಂಡಿಗೆ ಬಲಿಯಾದ ಬೆನ್ನಿಗೆ ಈ ಎನ್‌ಕೌಂಟರ್ ನಡೆದಿದೆ. ಜನವರಿ 31 ರಂದು ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಕಾರ್ಯಾಚರಣೆಗೆ ಹೊರಟಿದ್ದಾಗ ಗುಂಡಿನ ಚಕಮಕಿ ನಡೆದು ಎಂಟು ಮಾವೋವಾದಿಗಳು ಸಾವನ್ನಪ್ಪಿದ್ದರು.
ಪಶ್ಚಿಮ ಬಸ್ತಾರ್ನಲ್ಲಿ ನಕ್ಸಲರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಶುಕ್ರವಾರ ಕಾರ್ಯಾಚರಣೆ ಆರಂಭಿಸಲಾಗಿತ್ತು. ಜಿಲ್ಲಾ ಮೀಸಲು ಪಡೆ ಮತ್ತು ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆಯ ಸಿಬ್ಬಂದಿ, ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಕೋಬ್ರಾ ಭಾಗಿಯಾಗಿದ್ದವು.
ಮಾರ್ಚ್ 2026ರೊಳಗೆ ಭಾರತದಿಂದ ನಕ್ಸಲಿಸಂ ನಿರ್ಮೂಲನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಹೇಳಿದ್ದರು. ಇದರ ಬೆನ್ನಿಗೆ ನಕ್ಸಲ್ ನಿಗ್ರಹ ಕಾರ್ಯಾಚರಣೆ ತೀವ್ರಗೊಂಡಿದೆ. ಜನವರಿ 6 ರಂದು ಛತ್ತೀಸ್‌ಗಢದಲ್ಲಿ ನಕ್ಸಲರು ನಡೆಸಿದ ಐಇಡಿ ಸ್ಫೋಟದಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್‌ನ (ಡಿಆರ್‌ಜಿ) 8 ಯೋಧರು ಮತ್ತು ಓರ್ವ ಚಾಲಕ ಸಾವನ್ನಪ್ಪಿದ್ದ ಬಳಿಕ ಅಮಿತ್ ಶಾ ಈ ಪ್ರತಿಜ್ಞೆ ಮಾಡಿದ್ದರು.
ಭದ್ರತಾ ಪಡೆ ಎನ್‌ಕೌಂಟರ್‌ಗೆ 12 ನಕ್ಸಲರು ಬಲಿ
