ರಾತೋರಾತ್ರಿ ಕಲಾವಿದನನ್ನು ಬಂಧಿಸಿ ಕರೆದೊಯ್ದ ಕಾಸರಗೋಡು ಪೊಲೀಸರು
ಮಂಗಳೂರು: ಯಕ್ಷಗಾನದ ಪ್ರಸಿದ್ಧ ಸ್ತ್ರೀ ವೇಷಧಾರಿಯೊಬ್ಬರು ಕಾಸರಗೋಡಿನ ಸಮೀಪದ ಅರ್ಚಕರೊಬ್ಬರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ 10 ಲಕ್ಷಕ್ಕೂ ಅಧಿಕ ಹಣ ವಸೂಲು ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ ಎನ್ನಲಾಗಿದೆ. ಪ್ರಸಿದ್ಧ ಮೇಳಗಳಲ್ಲಿ ಸ್ತ್ರೀ ಪಾತ್ರ ನಿರ್ವಹಣೆ ಮಾಡುತ್ತಿದ್ದ ಅಶ್ವಥ್ ಆಚಾರ್ಯ ಆರೋಪಿ ಎನ್ನಲಾಗಿದೆ.
ಯಕ್ಷಗಾನ ಕಲಾವಿದನೊಬ್ಬ ಎಸಗಿರುವ ಈ ಕೃತ್ಯದಿಂದ ಇಡೀ ಯಕ್ಷಗಾನ ಲೋಕವೇ ತಲೆತಗ್ಗಿಸುವಂತೆ ಆಗಿದೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅಶ್ವಥ್ ಆಚಾರ್ಯ ಫೇಸ್‌ಬುಕ್‌ನಲ್ಲಿ ಕಾಸರಗೋಡು ಸಮೀಪದ ಬದಿಯಡ್ಕ ಮೂಲದ ಅರ್ಚಕರನ್ನು ತಾನು ಯಕ್ಷಗಾನ ಕಲಾವಿದ ಎಂದು ಪರಿಚಯಿಸಿಕೊಂಡು ಫ್ರೆಂಡ್ ಆಗಿದ್ದ. ಬಳಿಕ ಇಬ್ಬರೂ ಆನ್‌ಲೈನ್‌ನಲ್ಲಿ ಸಂಪರ್ಕದಲ್ಲಿದ್ದು, ಲೈಂಗಿಕವಾಗಿ ಆಕರ್ಷಿಸಿ ಸೆಕ್ಸ್ ಸಂಬಂಧಿಸಿ ಇಬ್ಬರೂ ಚಾಟ್ ಮಾಡುತ್ತಿದ್ದರು. ಫೋಟೊ, ವೀಡಿಯೊ ಶೇರ್ ಮಾಡಿಕೊಂಡಿದ್ದು, ಇದನ್ನೇ ಮುಂದಿಟ್ಟು ಅರ್ಚಕನನ್ನು ಅಶ್ವಥ್ ಆಚಾರ್ಯ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೆ, ತಾನು ಯುವತಿಯಾಗಿ ಲಿಂಗ ಬದಲಾಯಿಸಿಕೊಳ್ಳುತ್ತೇನೆ, ಅದಕ್ಕಾಗಿ ಹಣದ ಅಗತ್ಯವಿದೆ ಎಂದೂ ನಂಬಿಸಿದ್ದಾನೆ.
ಕಳೆದ ನವೆಂಬರ್‌ನಿಂದೀಚೆಗೆ ಅರ್ಚಕ ಅಶ್ವಥ್ ಆಚಾರ್ಯನ ಮಾತಿಗೆ ಮರುಳಾಗಿ 10.50 ಲಕ್ಷ ರೂ. ಅಶ್ವಥ್ ಆಚಾರ್ಯನ ಖಾತೆಗೆ ವರ್ಗಾಯಿಸಿದ್ದರು. ಪೌರೋಹಿತ್ಯ ನಡೆಸುತ್ತಿದ್ದ ಅರ್ಚಕನಿಗೆ ಮತ್ತಷ್ಟು ಹಣ ನೀಡದಿದ್ದರೆ ವೀಡಿಯೊ, ಫೋಟೊ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತೇನೆಂದು ಬೆದರಿಸಿದ್ದಾನೆ. ಇವನ ಕಾಟ ತಡೆಯಲಾಗದೆ ಅರ್ಚಕ ಫೆ.5ರಂದು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಕಾಸರಗೋಡು ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದ ಪೊಲೀಸರು ಆರೋಪಿಯನ್ನು ಫೆ.6ರಂದು ಮಂಗಳೂರಿನ ಮನೆಯಿಂದಲೇ ನಡುರಾತ್ರಿಯಲ್ಲಿ ಬಂಧಿಸಿ ಕರೆದೊಯ್ದಿದ್ದಾರೆಎಂದು ತಿಳಿದುಬಂದಿದೆ.
ಅರ್ಚಕ 3 ಲಕ್ಷ ರೂ.ಗೂಗಲ್ ಪೇಯಲ್ಲಿ ಪಾವತಿಸಿದ್ದರೆ, 7.5 ಲಕ್ಷ ರೂ. ಹಂತಹಂತವಾಗಿ ಮೂರು ಬಾರಿ ಬ್ಯಾಂಕ್ ಖಾತೆ ಮೂಲಕ ಪಾವತಿಸಿದ್ದಾರೆ. ಆರೋಪಿ ಬೇರೆಯವರನ್ನೂ ಬ್ಲ್ಯಾಕ್‌ಮೇಲ್ ಮಾಡಿದ್ದಾನೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಶ್ವಥ್ ಆಚಾರ್ಯ ಬಡಗುತಿಟ್ಟಿನ ಪ್ರಸಿದ್ಧ ಗಜಮೇಳದಲ್ಲಿ ಮೂರು ವರ್ಷಗಳ ಹಿಂದೆ ಸ್ತ್ರೀ ವೇಷಧಾರಿ ಆಗಿದ್ದ. ತೆಂಕುತಿಟ್ಟಿನ ಮೇಳಗಳಲ್ಲಿಯೂ ಪ್ರಮುಖ ಸ್ತ್ರೀ ವೇಷಧಾರಿ ಆಗಿದ್ದ. ಇವನ ನೃತ್ಯ ಆಕರ್ಷಕವಾಗಿರುತ್ತಿತ್ತು.