ಸೋಲು-ಗೆಲುವಿನ ನಡುವೆ ಹೊಯ್ದಾಡುತ್ತಿರುವ ಅರವಿಂದ ಕೇಜ್ರಿವಾಲ್
ಹೊಸದಿಲ್ಲಿ : ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್ ಪರಾಭವ ಬಹುತೇಕ ನಿಶ್ಚಿತಗೊಂಡಿರುವಂತೆ ಕಾಂಗ್ರೆಸ್ ಮತ್ತು ಆಪ್ ವಿರುದ್ಧ ಇಂಡಿ ಮೈತ್ರಿಕೂಟದ ಮಿತ್ರಪಕ್ಷಗಳು ಕೆಂಡ ಕಾರತೊಡಗಿವೆ. ಇಂಡಿ ಭಾಗವಾಗಿರುವ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಆಪ್ ಮೇಲೆ ಸೋಲಿನ ಕರಿಮೋಡ ಕವಿಯುತ್ತಿರುವಂತೆಯೇ ನಿಮ್ಮೊಳಗೆ ಕಿತ್ತಾಡಿ ನಾಶವಾಗಿ ಹೋಗಿ ಎಂದು ಲೇವಡಿ ಮಾಡಿದ್ದಾರೆ.
ದಿಲ್ಲಿ ಚುನಾವಣೆಯಲ್ಲಿ ಇಂಡಿ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಆಪ್ ಪ್ರತ್ಯೇಕವಾಗಿ ಸ್ಪರ್ಧಿಸಿದ್ದು ಮಾತ್ರವಲ್ಲದೆ ಪ್ರಚಾರದ ವೇಳೆ ಸಾಕಷ್ಟು ಕಿತ್ತಾಡಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಓಮರ್ ಅಬ್ದುಲ್ಲ ಇಂಡಿ ಮೈತ್ರಿಕೂಟದ ಉದ್ದೇಶವಾದರೂ ಏನು ಎಂದು ಕೇಳಿದ್ದಾರೆ. ತಮ್ಮೊಳಗೆ ಕಿತ್ತಾಡಿಕೊಳ್ಳಲು ಮೈತ್ರಿ ರಚನೆ ಮಾಡಿದ್ದೀರಾ ಅಥವಾ ಇದು ಲೋಕಸಭೆ ಚುನಾವಣೆಗಾಗಿ ಮಾಡಿಕೊಂಡ ಅನಿವಾರ್ಯ ಮೈತ್ರಿಯೇ ಎಂಬುದನ್ನು ಸ್ಪಷ್ಟಪಡಿಸಲು ಕಾಂಗ್ರೆಸ್ಸನ್ನು ಒತ್ತಾಯಿಸಿದ್ದಾರೆ.
ಜೀ ಭರ್ ಕರ್ ಲಡೋ, ಸಮಾಪ್ತ್ ಕರೋ ಏಕ್ ದೂಸ್ರೆ ಕೋ ಎಂಬ ಹಿಂದಿಯ ಜನಪ್ರಿಯ ನಾಣ್ಣುಡಿಯನ್ನು ಬಳಸಿ ಕಾಂಗ್ರೆಸ್ ಮತ್ತು ಮತ್ತು ಆಪ್ ಕಾಲೆಳೆದಿರುವ ಉಮರ್ ಅಬ್ದುಲ್ಲ, ಇನ್ನಷ್ಟು ಕಿತ್ತಾಡಿಕೊಳ್ಳಿ ಏನನ್ನೂ ಉಳಿಸಬೇಡಿ ಎಂದಿದ್ದಾರೆ.
ದಿಲ್ಲಿ ಚುನಾವಣೆಯ ಆರಂಭಿಕ ಹಂತದ ಟ್ರೆಂಡ್ ಪ್ರಕಾರ ಬಿಜೆಪಿ 42 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆಪ್ ಬರೀ 28 ಸ್ಥಾನಗಳಲ್ಲಿ ಮುಂದಿದ್ದು, ಕಾಂಗ್ರೆಸ್ ಸಾಧನೆ ಶೂನ್ಯ. ಸ್ವತಹ ಅರವಿಂದ ಕೇಜ್ರಿವಾಲ್ ಸೋಲು ಗೆಲುವಿನ ನಡುವೆ ಹೊಯ್ದಾಡುತ್ತಿದ್ದಾರೆ. 10.30ಕ್ಕೆ ಪ್ರಕಟವಾದ ಫಲಿತಾಂಶದ ಪ್ರಕಾರ ಕೇಜ್ರಿವಾಲ್ ಬಿಜೆಪಿ ಅಭ್ಯರ್ಥಿಯಿಂದ ತುಸು ಹಿಂದೆ ಇದ್ದಾರೆ.