ಪುತ್ತೂರು: ಯುವ ಐಎಎಸ್ ಅಧಿಕಾರಿ ಜುಬಿನ್ ಮೊಹಪಾತ್ರ ಅವರು ಉತ್ತಮ ಮನುಷ್ಯತ್ವ ಹೊಂದಿರುವ ಒಳ್ಳೆಯ ದೃಷ್ಟಿಕೋನ ಹೊಂದಿರುವ, ಬಡವರ ಹಾಗೂ ಸಮಾಜದ ಕಾಳಜಿ ಹೊಂದಿರುವ ಅತ್ಯಂತ ಕ್ರಿಯಾಶೀಲ ಅಧಿಕಾರಿ. ಉದ್ದೇಶ ಸರಿ ಇದ್ದಾಗ ಉನ್ನತ ಅವಕಾಶಗಳೂ ಹುಡುಕಿಕೊಮಡು ಬರುತ್ತವೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಪುತ್ತೂರು ಉಪವಿಭಾಗಾಧಿಕಾರಿಯಾಗಿ 13 ತಿಂಗಳು ಕರ್ತವ್ಯ ನಿರ್ವಹಿಸಿ ರಾಯಚೂರು ಮಹಾನಗರಪಾಲಿಕೆ ಡೆಪ್ಯೂಟಿ ಕಮಿಷನರ್ ಆಗಿ ವರ್ಗಾವಣೆಗೊಂಡಿರುವ ಜುಬಿನ್ ಮೊಹಪಾತ್ರ ಅವರಿಗೆ ಪುತ್ತೂರು ಉಪವಿಭಾಗ ಮಟ್ಟದಿಂದ ನಗರದ ಸರಕಾರಿ ನೌಕರರ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುತ್ತೂರು ಉಪವಿಭಾಗಕ್ಕೆ ದೊಡ್ಡ ಇತಿಹಾಸವಿದೆ. ಇಲ್ಲಿ ಕರ್ತವ್ಯ ನಿರ್ವಹಿಸಿದ ಹಿರಿಯ ಅಧಿಕಾರಿಗಳು ಪುತ್ತೂರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಜುಬಿನ್ ಅವರು ಪ್ರೊಬೆಷನರಿ ಸೇವೆಯ ಸಂದರ್ಭದಲ್ಲಿ ಉತ್ತರ ಕನ್ನಡದಲ್ಲಿ ನನ್ನ ಜತೆ ಕೆಲಸ ಮಾಡಿದ್ದಾರೆ. ಆ ಅವಧಿಯಲ್ಲಿಯೇ 5 ಸಾಧನಾ ಪ್ರಶಸ್ತಿ ಪಡೆದುಕೊಂಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚುನಾವಣಾ ಕರ್ತವ್ಯ, ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸೇರಿದಂತೆ ಸುಬ್ರಹ್ಮಣ್ಯ ದೇವಾಲಯದಲ್ಲೂ ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳುವಲ್ಲಿ ಜುಬಿನ್ ಗುರುತಿಸುವ ಸೇವೆ ಮಾಡಿದ್ದಾರೆ. ಅವರ ವೇಗ ಹಾಗೂ ಸಾಧನೆಯನ್ನು ಗಮನಿಸಿಯೇ ಅವರ ಹೆಸರನ್ನು ಪಟ್ಟಿ ಮಾಡಿಕೊಂಡು ರಾಯಚೂರಿಗೆ ಕರೆಸಿಕೊಂಡಿದ್ದಾರೆ. ಸೇವೆ ಮಾಡುವ ಹುಚ್ಚು ಇರುವವರಿಗೆ ಅವಕಾಶಗಳೂ ಅರಸಿಕೊಂಡು ಬರುತ್ತವೆ ಎಂದು ಮುಗಿಲನ್ ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜುಬಿನ್ ಮೊಹಪಾತ್ರ, ಕಂದಾಯ ಹಾಗೂ ಪೊಲೀಸ್ ಇಲಾಖೆ ಸಮರ್ಪಕವಾಗಿ ಕೆಲಸ ಮಾಡಿದರೆ ಜನರಿಗೆ ಬಹಳಷ್ಟು ಪ್ರಯೋಜನವಾಗುತ್ತದೆ. ಕೆಲವೊಂದು ಬಾರಿ ಮಿತಿಯನ್ನು ಮೀರಿ ಹೋದಾಗ ಮಾತ್ರ ಪ್ರಯೋಜನವಾಗುತ್ತದೆ. ಪುತ್ತೂರಿನಲ್ಲಿ ಆದ ಮೊದಲ ಪೋಸ್ಟಿಂಗ್ ವಿಶೇಷವಾಗಿದೆ ಮತ್ತು ನೆನಪಿನಲ್ಲಿ ಇಟ್ಟುಕೊಳ್ಳುವಂತದ್ದಾಗಿದೆ. ಈ ಕುರಿತು ಹೆಮ್ಮೆ ಇದೆ ಎಂದರು. ಉಪವಿಭಾಗ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಸಹಕಾರ ನೀಡಿದ ಎಲ್ಲಾ ಅಧಿಕಾರಿ, ಸಿಬಂದಿಗೆ ಕೃತಜ್ಞತೆ ಸಲ್ಲಿಸಿದರು.
ಪುತ್ತೂರು ಕಂದಾಯ ಇಲಾಖೆಯ ಅಧಿಕಾರಿಗಳಾದ ಚಂದ್ರಶೇಖರ್, ಚಂದ್ರ ನಾಯ್ಕ್, ನರಿಯಪ್ಪ, ಸುಲೋಚನಾ ಮೊದಲಾದವರು ಅನುಭವ ಹಂಚಿಕೊಂಡರು. ಉಪವಿಭಾಗದ ಅಧಿಕಾರಿಗಳು, ಸಿಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವೇದಿಕೆಯಲ್ಲಿ ಜುಬಿನ್ ಅವರ ಸಹಪಾಠಿ ಕೇರಳದ ಪ್ರೊಬೆಷನರಿ ಐ.ಎ.ಎಸ್. ಅಧಿಕಾರಿ ಸಾಯಿಕೃಷ್ಣ, ಪುತ್ತೂರು ಪ್ರೊಬೆಷನರಿ ಉಪವಿಭಾಗಾಧಿಕಾರಿ ಶ್ರವಣ್ ಕುಮಾರ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕ್, ಕಡಬ ತಹಶೀಲ್ದಾರ್ ಪ್ರಭಾಕರ ಖುಜೂರೆ, ಸುಳ್ಯ ತಹಶೀಲ್ದಾರ್ ಮಂಜುಳಾ, ಭೂಮಾಪನಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ಉಪಸ್ಥಿತರಿದ್ದರು. ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿ, ಕಂದಾಯ ನಿರೀಕ್ಷಕ ಗೋಪಾಲ್ ವಮದಿಸಿದರು. ದೈ.ಶಿ. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರ್ವಹಿಸಿದರು.