ದೌರ್ಜನ್ಯದ ದೂರು ಕೊಟ್ಟವರ ವಿರುದ್ಧವೇ ಕಿರುಕುಳ ನೀಡಿ ಸಾವಿಗೆ ಕಾರಣರಾದದ್ದಕ್ಕೆ ಆಕ್ರೋಶ
ಬೆಂಗಳೂರು: ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರು ತನ್ನ ತಂದೆಯ ಶವವನ್ನೇ ಪೊಲೀಸ್ ಠಾಣೆ ಮುಂದಿಟ್ಟು ನ್ಯಾಯಕ್ಕಾಗಿ ಆಗ್ರಹಿಸಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗದ ಹಾರುಗೇರಿಯಲ್ಲಿ ಇಂದು ಮುಂಜಾನೆ ಹೊತ್ತು ನಡೆದಿದೆ. ವಿಜಯಪುರ ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಶೋಕ ಸದಲಗಿ ಹಾರುಗೇರಿ ಪೊಲೀಸ್ ಠಾಣೆ ಪಿಎಸ್ಐ ಮಾಳಪ್ಪ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧರಣಿ ನಡೆಸಿದವರು. ಜನವರಿ10ರಂದು ಇನ್‌ಸ್ಪೆಕ್ಟರ್ ಅಶೋಕ ಸದಲಗಿ ತಂದೆ ಅಣ್ಣಪ್ಪ ಅವರ ಜಮೀನಿಗೆ ಬಾಬು ನಡೋಣಿ, ಪ್ರತಾಪ್ ಹರೋಲಿ, ವಸಂತ ಚೌಗಲಾ ಎಂಬುವರು ಅಕ್ರಮವಾಗಿ ಪ್ರವೇಶ ಮಾಡಿ ಅಣ್ಣಪ್ಪ ಅವರ ಮೇಲೆ ಹಲ್ಲೆ ಮಾಡಿದ್ದರು. ಕೂಡಲೇ ಅಣ್ಣಪ್ಪ 112ಕ್ಕೆ ಕರೆ ಮಾಡಿ ಪೊಲೀಸರನ್ನು ಕರೆಸಿದ್ದರು.
ಅಣ್ಣಪ್ಪ ಹಾಗೂ ಬಾಬು ನಡೋಣಿ ಸೇರಿದಂತೆ ಎಲ್ಲರನ್ನೂ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದರು. ಅಣ್ಣಪ್ಪ ಅವರನ್ನು ಇಡೀ ದಿನ ಠಾಣೆಯಲ್ಲಿರಿಸಿಕೊಂಡು ಕಿರುಕುಳ ನೀಡಿದ್ದಾರೆ ಆರೋಪಿಸಲಾಗಿದೆ. ಸಂಜೆಯಾಗುತ್ತಿದ್ದಂತೆ ಅಣ್ಣಪ್ಪ ಅವರ ಶುಗರ್ ಲೆವೆಲ್ ಕಡಿಮೆಯಾಗಿ, ಬಿಪಿ ಹೆಚ್ಚಾಗಿ ತೀವ್ರ ಅಸ್ವಸ್ಥರಾಗಿದ್ದರು. ಇನ್ನೋರ್ವ ಪುತ್ರ ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಬಳಿಕ, ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಇನ್‌ಸ್ಪೆಕ್ಟರ್ ಅಶೋಕ್ ಅವರು ಹಾರುಗೇರಿ ಪಿಎಸ್ಐ, ಸಿಪಿಐ ಮತ್ತು ಅಥಣಿ ಡಿಐಎಸ್ಪಿಗೆ ಮನವಿ ಮಾಡಿದ್ದರು. ಆದರೆ ದೂರು ದಾಖಲಿಸಿಕೊಳ್ಳದೆ ಪೊಲೀಸರು ಬೇಜವಾಬ್ದಾರಿಯಿಂದ ವರ್ತಿಸಿದ್ದರು. ಇದಲ್ಲದೆ ಇನ್‌ಸ್ಪೆಕ್ಟರ್ ಅಶೋಕ್ ಸೋದರನ ಮೇಲೆಯೇ ಪಿಎಸ್ಐ ಮಾಳಪ್ಪ ಫೆಬ್ರವರಿ 2ರಂದು ಅಟ್ರಾಸಿಟಿ ಕೇಸ್ ದಾಖಲಿಸಿದ್ದರು.
ಶನಿವಾರ ಮುಂಜಾನೆ ಅಣ್ಣಪ್ಪ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಇನ್‌ಸ್ಪೆಕ್ಟರ್ ಅಶೋಕ್ ಹಾರುಗೇರಿ ಪೊಲೀಸ್ ಠಾಣೆ ಎದರು ತಂದೆಯ ಶವಿಟ್ಟು ಪ್ರತಿಭಟನೆ ನಡೆಸಿ ಪಿಎಸ್ಐ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಬರುವಂತೆ ಪಟ್ಟು ಹಿಡಿದಿದ್ದಾರೆ.
ಮುಂಜಾನೆ ಎರಡು ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕೋಡಿ ಡಿವೈಎಸ್‌ಪಿ ಇನ್‌ಸ್ಪೆಕ್ಟರ್ ಅಶೋಕ್ ಅವರ ಮನವೊಲಿಸಿ ಬಳಿಕ ಇನ್‌ಸ್ಪೆಕ್ಟರ್ ಅಶೋಕ್ ಪ್ರತಿಭಟನೆ ಕೈ ಬಿಟ್ಟಿದ್ದಾರೆ.