ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಮತ ಎಣಿಕೆಗಾಗಿ ವ್ಯಾಪಕ ತಯಾರಿ ಮಾಡಿಕೊಳ್ಳಲಾಗಿದ್ದು, 8 ಗಂಟೆ ಎಣಿಕೆ ಶುರುವಾಗಲಿದೆ. ಮೊದಲು ಅಂಚೆ ಮತಗಳನ್ನು ಎಣಿಸಿ ಬಳಿಕ ಮತಯಂತ್ರಗಳ ಮತಗಳನ್ನು ಎಣಿಸುವುದು ಸಂಪ್ರದಾಯ. ಫೆಬ್ರವರಿ 5ರಂದು ದಿಲ್ಲಿ ವಿಧಾನಸಭೆಯ 3ಲ್ಲ 70 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಶೇ. 60.54 ಮತದಾನವಾಗಿದೆ. ದಿಲ್ಲಿ ಮಟ್ಟಿಗೆ ಇದು ಉತ್ತಮ ಮತದಾನ ಪ್ರಮಾಣವಾಗಿರುವುದರಿಂದ ಫಲಿತಾಂಶ ಏರುಪೇರಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.
ಮತದಾನ ಮುಕ್ತಾಯವಾದ ಬೆನ್ನಿಗೆ ಪ್ರಕಟವಾದ ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಈ ಸಲ ದಿಲ್ಲಿಯಲ್ಲಿ ಅಧಿಕಾರ ಅರವಿಂದ ಕೇಜ್ರಿವಾಲ್ ಕೈತಪ್ಪಲಿದೆ ಎಂದು ಭವಿಷ್ಯ ನುಡಿದಿವೆ. ನಿಚ್ಚಳ ಬಹುಮತದೊಂದಿಗೆ 27 ವರ್ಷಗಳ ಬಳಿಕ ದಿಲ್ಲಿಯ ಗದ್ದುಗೆ ಬಿಜೆಪಿ ಪಾಲಾಗಲಿದೆ ಎಂದು ಭವಿಷ್ಯ ನುಡಿದಿರುವ ಕಾರಣ ಫಲಿತಾಂಶ ದೇಶಾದ್ಯಂತ ಕುತೂಹಲ ಕೆರಳಿಸಿದೆ.
ಆಮ್ ಆದ್ಮಿ ಪಕ್ಷ (ಎಎಪಿ), ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಇದ್ದರೂ ಸಮೀಕ್ಷೆಗಳೆಲ್ಲ ಕಾಂಗ್ರೆಸ್ ನಗಣ್ಯ ಎಂದೇ ಹೇಳಿವೆ. ಫಲಿತಾಂಶ ಬದಲಾಯಿಸುವ ಯಾವ ಸಾಮರ್ಥ್ಯವೂ ಕಾಂಗ್ರೆಸ್‌ಗಿಲ್ಲ ಎಂದು ಸಮೀಕ್ಷೆಗಳು ಹೇಳಿವೆ.
ಮೂರು ವರ್ಷಗಳ ಬಳಿಕ ದಿಲ್ಲಿಯಲ್ಲಿ ಬಿಜೆಪಿ ಅಧಿಕಾರ ಕಸಿದುಕೊಳ್ಳುವಲ್ಲಿ ಯಶಸ್ವಿಯಾದರೆ ಅದು ಐತಿಹಾಸಿಕ ಸಾಧನೆಯೇ ಆಗಲಿದೆ. ಆಪ್ ವಿರುದ್ಧ ಕೇಳಿ ಬಂದ ಸರಣಿ ಹಗರಣಗಳ ಆರೋಪಗಳು, ಜನಸಾಮಾನ್ಯನ ನಾಯಕ ಎಂದು ಬಿಂಬಿಸಿಕೊಳ್ಳುತ್ತಿರುವ ಕೇಜ್ರಿವಾಲ್ ಹಾಗೂ ಆಪ್‌ನ ಇತರ ನಾಯಕರ ಐಷರಾಮಿ ಜೀವನ ಇವುಗಳೆಲ್ಲ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿವೆ ಎನ್ನಲಾಗುತ್ತಿದೆ.
ಬಿಜೆಪಿ ಈ ಬಾರಿ ದಿಲ್ಲಿಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದೆ.