ಚುನಾವಣೆಯಲ್ಲಿ ಆಪ್‌ಗೆ ಹೀನಾಯ ಮುಖಭಂಗ; ಮೂಲೆ ಸೇರಿದ ಪೊರಕೆ
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಪರಮೋಚ್ಚ ನಾಯಕಮಾಜಿ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ್ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಪರಾಭಚ ಅನುಭವಿಸಿದ್ದಾರೆ. ಇದರೊಂದಿಗೆ ಚುನಾವಣೆಯಲ್ಲಿ ಆಡಳಿತಾರೂಢ ಆಪ್‌ಗೆ ಕೂಡ ಭಾರಿ ಮುಖಭಂಗವಾದಂತಾಗಿದೆ. ಸತತ ಎರಡು ಬಾರಿ ದಿಲ್ಲಿಯ ಗದ್ದುಗೆ ಏರಿದ್ದ ಎಎಪಿ ಮತ್ತು ಕೇಜ್ರಿವಾಲ್ಗೆ ಈ ಬಾರಿ ಅಬಕಾರಿ ನೀತಿ ಹಗರಣದಿಂದ ಭಾರಿ ಹಿನ್ನಡೆಯಾಗಿತ್ತು. ಅದು ಮತದಾನದ ಮೇಲೂ ಪರಿಣಾಮ ಬೀರಿದಂತಿದೆ. ಬಿಜೆಪಿ 40ಕ್ಕೂ ಅಧಿಕ ಸ್ಥಾನಗಳೊಂದಿಗೆ ನಿಚ್ಚಳ ಬಹುಮತದೊಂದಿಗೆ 27 ವರ್ಷಗಳ ಬಳಿಕ ದಿಲ್ಲಿ ಗದ್ದುಗೆ ಏರುವುದು ಖಚಿತವಾಗಿದೆ.
ಇದರೊಂದಿಗೆ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಕೂಡ ಹೀನಾಯ ಸೋಲನುಭವಿಸಿದ್ದಾರೆ. ಜಂಗ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಸೋಡಿಯಾ ವಿರುದ್ಧ ಬಿಜೆಪಿ ಅಭ್ಯರ್ಥಿ ತರ್ವೀಂದರ್ ಸಿಂಗ್ ಗೆಲುವು ಸಾಧಿಸಿದ್ದಾರೆ. ಕೇವಲ 636 ಮತಗಳ ಅಂತರದಿಂದ ಎಎಪಿ ಹಿರಿಯ ನಾಯಕ ಮುಖಭಂಗ ಅನುಭವಿಸಿದ್ದಾರೆ.
ಜಂಗ್‌ಪುರ ಕ್ಷೇತ್ರದಲ್ಲಿ ಸಿಂಗ್ ಸಮುದಾಯ ಪ್ರಾಬಲ್ಯ ಹೊಂದಿದೆ. ಅದೇ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಬಿಜೆಪಿ ರೂಪಿಸಿದ್ದ ತಂತ್ರಗಾರಿಕೆ ಕೆಲಸ ಮಾಡಿದೆ. ಇದೇ ಮೊದಲ ಬಾರಿಗೆ ಸ್ಪರ್ಧಿಸಿ ತರ್ವೀಂದರ್ ಸಿಂಗ್ ಗೆದ್ದು ಬೀಗಿದ್ದಾರೆ.
ಅಬಕಾರಿ ನೀತಿ ಹಗರಣದಲ್ಲಿ ಮನೀಶ್ ಸಿಸೋಡಿಯಾ ಜೈಲು ಪಾಲಾಗಿದ್ದರು. ಕೇಜ್ರಿವಾಲ್ ಸರ್ಕಾರದಲ್ಲಿ ಗೃಹ, ಹಣಕಾಸು, ಶಿಕ್ಷಣ, ಆರೋಗ್ಯ, ಲೋಕೋಪಯೋಗಿ ಇಲಾಖೆ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಸೇರಿದಂತೆ 18 ಪ್ರಮುಖ ಖಾತೆಗಳನ್ನು ಸಿಸೋಡಿಯಾ ನಿರ್ವಹಿಸುತ್ತಿದ್ದರು. ಸರ್ಕಾರವನ್ನು ತಮ್ಮ ಹೆಗಲ ಮೇಲೆ ಹೊತ್ತು ಯಶಸ್ವಿಯಾಗಿ ನಿರ್ವಹಿಸಿದ್ದರು. ಕೇಜ್ರಿವಾಲ್ ಅವರ ಅತ್ಯಂತ ವಿಶ್ವಾಸಾರ್ಹ ಸಹಾಯಕ ಆಗಿದ್ದರು.