ನೌಕರರ ಹೆಸರಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಸಾಲ ಪಡೆದು ವಂಚಿಸಿದ ಪ್ರಕರಣ
ಬೆಂಗಳೂರು: ಬ್ಯಾಂಕಿಗೆ ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ಇನ್ನಷ್ಟೇ ಪ್ರಕಟಿಸಬೇಕಿದೆ.
ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ರೆಡ್ಡಿ ಎಂಟಿವಿ, ಶ್ರೀನಿವಾಸ್ ಹಾಗೂ ಮುನಿರಾಜು ನಾಲ್ಕೂ ಜನರು ತಪ್ಪಿತಸ್ಥರು ಎಂದು ಕೋರ್ಟ್ ಹೇಳಿದೆ. ನಕಲಿ ದಾಖಲೆ ನೀಡಿ ಕೋಟ್ಯಾಂತರ ರೂಪಾಯಿ ಸಾಲ ಪಡೆದು ವಂಚನೆ ಮಾಡಿದ್ದ ಆರೋಪ ಈ ನಾಲ್ವರ ಮೇಲೆ ಇತ್ತು. ಇದೀಗ ಈ ಆರೋಪ ಸಾಬೀತಾಗಿದೆ.
2012ರಲ್ಲಿ ಖಾಸಗಿ ಬ್ಯಾಂಕ್‌ಗೆ ಕೃಷ್ಣಯ್ಯ ಶೆಟ್ಟಿ ಮತ್ತು ಸಂಗಡಿಗರು ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು. ನಕಲಿ ದಾಖಲೆ ನೀಡಿ ಕೋಟ್ಯಂತರ ರೂಪಾಯಿ ಸಾಲವನ್ನು ಕೃಷ್ಣ ಶೆಟ್ಟಿ ಪಡೆದುಕೊಂಡ ಆರೋಪ ಕೃಷ್ಣಯ್ಯ ಶೆಟ್ಟಿ ಮೇಲಿತ್ತು.
ಮಾಲೂಕು ಕ್ಷೇತ್ರದ ಬಿಜೆಪಿ ಶಾಸಕರೂ ಆಗಿದ್ದ, ಬಾಲಾಜಿ ಕೃಪಾ ಎಂಟರ್‌ಪ್ರೈಸಸ್‌ನ ಮಾಲೀಕ ಕೃಷ್ಣಯ್ಯ ಶೆಟ್ಟಿ 1993ರಲ್ಲಿ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ, ಹಲವು ನೌಕರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ 7.17 ಕೋಟಿ ರೂ. ಬ್ಯಾಂಕ್ ಸಾಲ ಪಡೆದಿದ್ದರು. ಇದರಲ್ಲಿ 3.53 ಕೋಟಿ ಸಾಲ ತೀರಿಸಿಲ್ಲ ಎಂದು ಆರೋಪಿಸಲಾಗಿತ್ತು. ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ, ಚಾರ್ಜ್‌ಶೀಟ್ ಸಲ್ಲಿಸಿತ್ತು.