ಮಾಜಿ ಪ್ರಧಾನಿ ಶೇಖ್ ಹಸೀನಾ ಭಾಷಣದಿಂದ ಕೆರಳಿದ ವಿರೋಧಿಗಳ ಕೃತ್ಯ
ಢಾಕಾ: ದಂಗೆಯಿಂದ ಕಂಗಾಲಾಗಿರುವ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಮಾಡಿದ ಭಾಷಣದಿಂದ ಕೆರಳಿದ ವಿರೋಧಿ ಬಣ ರಾಜಧಾನಿ ಢಾಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿ ಅಪಾರ ನಾಶನಷ್ಟ ಉಂಟುಮಾಡಿದೆ.
ಶೇಖ್ ಹಸೀನಾ ತಂದೆ, ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಸ್ಮಾರಕ ಮತ್ತು ಅವರ ನಿವಾಸವನ್ನು ಧ್ವಂಸಗೊಳಿಸಲಾಗಿದೆ. ಮನೆಗೆ ಬೆಂಕಿ ಹಚ್ಚಿ, ಜೆಸಿಬಿ, ಕ್ರೇನ್ ಮೂಲಕ ಮನೆ ಧ್ವಂಸಗೊಳಿಸಿದ್ದಾರೆ.
ನಾವು ಗಳಿಸಿದ ಸ್ವಾತಂತ್ರ‍್ಯವನ್ನು, ಲಕ್ಷಾಂತರ ಹುತಾತ್ಮರ ಪ್ರಾಣವನ್ನು ಬುಲ್ಡೋಜರ್ ಮೂಲಕ ನಾಶಗಳಿಸಲು ಸಾಧ್ಯವಿಲ್ಲವೆಂದು ಶೇಖ್ ಹಸೀನಾ ಭಾರತದಿಂದ ಆನ್‌ಲೈನ್ ಮೂಲಕ ಮಾಡಿದ ಭಾಷಣಕ್ಕೆ ಕೆರಳಿದ ಪ್ರತಿಭಟನಾಕಾರರು ಅವಾಮಿ ಲೀಗ್ ಪಕ್ಷ ನಿಷೇಧಕ್ಕೆ ಆಗ್ರಹಿಸಿ ದಂಗೆ ಎಬ್ಬಿಸಿದ್ದಾರೆ.
ಶೇಖ್ ಹಸೀನಾ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಆನ್‌ಲೈನ್ ಮೂಲಕ ಭಾಷಣ ಮಾಡಿ ಪ್ರಸ್ತುತ ದುರಾಡಳಿತದ ವಿರುದ್ಧ ಪ್ರತಿರೋಧ ಸಂಘಟಿಸಲು ದೇಶವಾಸಿಗಳಿಗೆ ಕರೆ ನೀಡಿದ್ದರು. ನಾವು ಗಳಿಸಿದ ಸ್ವಾತಂತ್ರ‍್ಯವನ್ನು, ಲಕ್ಷಾಂತರ ಹುತಾತ್ಮರ ಪ್ರಾಣವನ್ನು ಬುಲ್ಡೋಜರ್ ಮೂಲಕ ನಾಶಗಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೊಹಮ್ಮದ್ ಯೂನಸ್ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.ನಾವು ನಿರ್ಮಾಣ ಮಾಡಿದ ಕಟ್ಟಡಗಳನ್ನು ಕೆಡವಬಹುದು, ಆದರೆ ಇತಿಹಾಸವನ್ನು ಕೆಡವಲು ಸಾಧ್ಯವಿಲ್ಲ. ಇಂದಲ್ಲ ನಾಳೆ ಅದು ತನ್ನ ಸೇಡು ತೀರಿಸಿಕೊಳ್ಳುತ್ತೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದ್ದರು.
ಪ್ರತಿಭಟನೆಕಾರರು ಧ್ವಂಸಗೊಳಿಸಿದ ಮನೆ ಬಾಂಗ್ಲಾದೇಶದ ಇತಿಹಾಸದಲ್ಲಿ ಅಸ್ಮಿತೆಯ ಸಂಕೇತವೂ ಆಗಿತ್ತು. ಶೇಖ್ ಮುಜೀಬ್ ಸ್ವಾತಂತ್ರ್ಯಪೂರ್ವದ ಸ್ವಾಯತ್ತತೆಯ ಚಳವಳಿಯನ್ನು ದಶಕಗಳ ಕಾಲ ಈ ಮನೆಯಿಂದಲೇ ಮುನ್ನಡೆಸಿದ್ದರು. ಬಳಿಕ ಇದನ್ನು ವಸ್ತು ಸಂಗ್ರಹಾಲಯವನ್ನಾಗಿ ಬದಲಾಯಿಸಲಾಗಿತ್ತು.