ಜಗತ್ತಿನ ಅತ್ಯಂತ ಸುರಕ್ಷಿತ ದೇಶದಲ್ಲಿ ನಡೆದ ಆಘಾತಕಾರಿ ಘಟನೆ
ಸ್ಟಾಕ್‌ಹೋಮ್ : ಸ್ವೀಡನ್ನ ಶಾಲೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಯೊಬ್ಬ ಯದ್ವಾತದ್ವಾ ಗುಂಡು ಹಾರಿಸಿದ ಪರಿಣಾಮ ಕನಿಷ್ಠ 10 ಮಂದಿ ಸಾವಿಗೀಡಾಗಿದ್ದಾರೆ ಹಾಗೂ ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದು ರಾಯ್ಟರ್ಸ್ ಸುದ್ದಿ ಮಾಧ್ಯಮ ವರದಿ ಮಾಡಿದೆ.
ಸಾಮಾನ್ಯವಾಗಿ ಅಮೆರಿಕದಲ್ಲಿ ನಡೆಯುತ್ತಿರುವ ಈ ಮಾದರಿಯ ದಾಳಿ ಅತ್ಯಂತ ಸುರಕ್ಷಿತ ದೇಶ ಎಂದು ಅರಿಯಲ್ಪಡುವ ಸ್ವೀಡನ್‌ನಲ್ಲೂ ಸಂಭವಿಸಿರುವುದು ಆಘಾತವುಂಟು ಮಾಡಿದೆ. ಬೆಳಗ್ಗೆ ಶಾಲೆ ಶುರುವಾಗುತ್ತಿದ್ದಂತೆಯೇ ಕಾರಿನಲ್ಲಿ ಬಂದು ಯದ್ವಾತದ್ವಾ ಗುಂಡು ಹಾರಿಸಿದ್ದಾನೆ. ಒರೆಬ್ರೊ ನಗರದ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಶಸ್ತ್ರಸಜ್ಜಿತ ವ್ಯಕ್ತಿ ಒಬ್ಬನೇ ಈ ಕೆಲಸವನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಭಯೋತ್ಪಾದಕರ ಕೈವಾಡವಿದ್ದಂತೆ ತೋರುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ರಾಜಧಾನಿ ಸ್ಟಾಕ್‌ಹೋಮ್‌ನಿಂದ ಪಶ್ಚಿಮಕ್ಕೆ 200 ಕಿ.ಮೀ ದೂರದಲ್ಲಿರುವ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸ್ವೀಡನ್ ಇತಿಹಾಸದಲ್ಲಿ ನಡೆದ ಅತ್ಯಂತ ಕೆಟ್ಟ ಸಾಮೂಹಿಕ ಗುಂಡಿನ ದಾಳಿ ಎಂದು ಪ್ರಧಾನಿ ಉಲ್ಫ್ ಕ್ರಿಸ್ಟಿರ್ಸನ್ ಹೇಳಿದ್ದಾರೆ.
ದಾಳಿಕೋರ ಕೂಡ ತನಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಆದರೆ ಅವನಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇದ್ದಂತೆ ಕಾಣುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಹಲವು ಜನರು ಗಾಯಗೊಂಡಿದ್ದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎನ್ನಲಾಗುತ್ತಿದೆ.