ಪ್ರಯಾಗ್‌ರಾಜ್ : ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡು ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿ ಜೊತೆಗಿದ್ದರು. ಬೆಳಗ್ಗೆ ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಗ್‌ರಾಜ್ ನದಿ ಬಳಿಗೆ ಸಾಗಿ ದೋಣಿಯಲ್ಲಿ ಹೋಗಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
ಕಳೆದ ಜ.13ರಂದು ಪ್ರಾರಂಭವಾಗಿರುವ ಮಹಾಕುಂಭಮೇಳಕ್ಕೆ ದೇಶ-ವಿದೇಶಗಳ ಅನೇಕ ಗಣ್ಯರು ಭೇಟಿ ನೀಡಿದ್ದಾರೆ. ಈಗಾಗಲೇ 38 ಕೋಟಿಗೂ ಅಧಿಕ ಜನ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಕಿರಣ್ ರಿಜಿಜು, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ನಾಯಕರು ಈಗಾಗಲೇ ಪವಿತ್ರ ಸ್ನಾನ ಮಾಡಿದ್ದಾರೆ. ಅನೇಕ ದೇಶಗಳ ಪ್ರತಿನಿಧಿಗಳು ಕೂಡ ಆಗಮಿಸಿದ್ದರು.
ಫೆಬ್ರವರಿ 1ರಂದು 77 ದೇಶಗಳ 118 ಸದಸ್ಯರ ನಿಯೋಗವು ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿತ್ತು. ಇದರಲ್ಲಿ ಹಲವು ದೇಶಗಳ ರಾಜತಾಂತ್ರಿಕರು ಮತ್ತು ಅವರ ಕುಟುಂಬಗಳು ಸೇರಿವೆ. ರಷ್ಯಾ, ಮಲೇಷ್ಯಾ, ಬೊಲಿವಿಯಾ, ಜಿಂಬಾಬ್ವೆ, ಲಾಟ್ವಿಯಾ, ಉರುಗ್ವೆ, ನೆದರ್‌ಲ್ಯಾಂಡ್ಸ್, ಮಂಗೋಲಿಯಾ, ಇಟಲಿ, ಜಪಾನ್, ಜರ್ಮನಿ, ಜಮೈಕಾ, ಅಮೆರಿಕ, ಸ್ವಿಟ್ಜರ್‌ಲ್ಯಾಂಡ್, ಸ್ವೀಡನ್, ಪೋಲೆಂಡ್, ಕ್ಯಾಮರೂನ್, ಉಕ್ರೇನ್, ಸ್ಲೊವೇನಿಯಾ ಮತ್ತು ಅರ್ಜೆಂಟೀನಾ ಮತ್ತಿತರ ದೇಶಗಳಿಂದ ಪ್ರತಿನಿಧಿಗಳು ಆಗಮಿಸಿದ್ದರು.