ನಟಿಯನ್ನು ಪ್ರೀತಿಸಿ 3 ಕೋ.ರೂ. ಮನೆ ಗಿಫ್ಟ್ ಕೊಟ್ಟಿದ್ದ
ಬೆಂಗಳೂರು : ದೇಶಾದ್ಯಂತ 180ಕ್ಕೂ ಹೆಚ್ಚು ಕಳ್ಳತನ ನಡೆಸಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬೆಂಗಳೂರಿನ ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ (37) ಈ ಕುಖ್ಯಾತ ಕಳ್ಳ. ಈತ ಕದ್ದ ಹಣದಿಂದಲೇ ತನ್ನ ಪ್ರೇಯಸಿಗೆ ಸುಮಾರು 3 ಕೋ. ರೂ. ಬೆಲೆಬಾಳುವ ಮನೆ ಕಟ್ಟಿಸಿಕೊಟ್ಟಿದ್ದಾನಂತೆ. ಈತನ ಪ್ರೇಯಸಿ ಅಂತಿಂಥವಳಲ್ಲ ಖ್ಯಾತ ನಟಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಪಂಚಾಕ್ಷರಿ ಸ್ವಾಮಿಗೆ ಮದುವೆಯಾಗಿ ಮಗುವಿದ್ದರೂ ಬೇರೆ ಯುವತಿಯರ ಹಿಂದೆ ಸುತ್ತಾಡುವ ಶೋಕಿ ಇತ್ತು. ಇದಕ್ಕಾಗಿ ಕಳ್ಳತನ ಮಾಡುತ್ತಿದ್ದ. ಆತನ ತಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.
2003ರಲ್ಲಿ ಅಪ್ರಾಪ್ತ ವಯಸ್ಕನಿದ್ದಾಗಲೇ ಕಳ್ಳತನಕ್ಕೆ ಇಳಿದಿದ್ದ. 2009ರಿಂದ ಪಕ್ಕಾ ಕಳ್ಳನಾಗಿದ್ದಾನೆ. 2014ರಲ್ಲಿ ಪ್ರಖ್ಯಾತ ನಟಿಯೊಬ್ಬಳ ಜೊತೆಗೆ ಸಂಬಂಧದಲ್ಲಿದ್ದೆ ಆಕೆಗಾಗಿ ಕೋಟಿ ಕೋಟಿ ಖರ್ಚು ಮಾಡಿದ್ದೇನೆ. 2016ರಲ್ಲಿ ಕೊಲ್ಕತ್ತದಲ್ಲಿ 3 ಕೋಟಿ ರೂ. ಖರ್ಚು ಮಾಡಿ ಮನೆ ಕಟ್ಟಿಸಿಕೊಟ್ಟಿದ್ದೇನೆ. ಆಕೆಯ ಬರ್ತ್‌ಡೇಗೆ 22 ಲಕ್ಷ ರೂ. ಮೌಲ್ಯದ ಅಕ್ವೇರಿಯಂ ಗಿಫ್ಟ್ ಕೊಟ್ಟಿದ್ದೇನೆ ಎಂದೆಲ್ಲ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ. 2016ರಲ್ಲಿ ಗುಜರಾತ್ ಪೊಲೀಸರು ಅವನನ್ನು ಬಂಧಿಸಿ ಜೈಲಿಗಟ್ಟಿದ್ದರು. 6 ವರ್ಷ ಗುಜರಾತ್ ಸಬರಮತಿ ಜೈಲಿನಲ್ಲಿದ್ದ ಪಂಚಾಕ್ಷರಿ ಸ್ವಾಮಿ ಹೊರಬಂದು ಮತ್ತೆ ಕಳ್ಳತನ ಮಾಡಲು ಆರಂಭಿಸಿದ್ದ. ಮಹಾರಾಷ್ಟ್ರ ಪೊಲೀಸರು ಅವನನ್ನು ಮತ್ತೊಮ್ಮೆ ಬಂಧಿಸಿದ್ದರು. ಅಲ್ಲೂ ಜೈಲಿನಿಂದ ಬಿಡುಗಡೆಯಾಗಿ 2024ರಲ್ಲಿ ಬೆಂಗಳೂರಿನಲ್ಲಿ ಮತ್ತೆ ಕಳ್ಳತನ ಶುರುಮಾಡಿದ್ದ.
ಜನವರಿ 9ರಂದು ಮಡಿವಾಳದಲ್ಲಿ ಮನೆ ಕಳ್ಳತನ ಮಾಡಿದ್ದ.
ಈ ಪ್ರಕರಣದಲ್ಲಿ ಬಂಧಿಸಿದಾಗ ವಿಚಾರಣೆ ವೇಳೆ ಈತನ ಮೇಲೆ 180ಕ್ಕೂ ಹೆಚ್ಚು ಕಳ್ಳತನ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಹೆಚ್ಚಾಗಿ ಗುಜರಾತ್, ಮಹಾರಾಷ್ಟ್ರದಲ್ಲಿ ಕಳ್ಳತನ ಮಾಡುತ್ತಿದ್ದ. ಸಿಕ್ಕಿಬೀಳದಂತೆ ಮಾಡಲು ರಸ್ತೆಯಲ್ಲಿ ಶರ್ಟ್ ಬದಲಿಸುವುದು ಮುಂತಾದ ತಂತ್ರಗಳನ್ನು ಅನುಸರಿಸುತ್ತಿದ್ದ. ಚಿನ್ನಾಭರಣ ಕರಗಿಸಲು ಫೈರ್ ಗನ್ ಇಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.