ಹೊಸದಿಲ್ಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಫೆಬ್ರವರಿ 12ರಿಂದ ಎರಡು ದಿನಗಳ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಟ್ರಂಪ್ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ ಅಮೆರಿಕ-ಭಾರತ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಇದು ಪ್ರಧಾನಿಯ ಮಹತ್ವದ ಪ್ರವಾಸ ಎಂದು ಪರಿಗಣಿಸಲಾಗಿದೆ.
ಎರಡು ದಿನಗಳ ಪ್ಯಾರಿಸ್ ಭೇಟಿಯನ್ನು ಮುಗಿಸಿದ ನಂತರ ಫೆಬ್ರವರಿ 12ರ ಸಂಜೆ ಪ್ರಧಾನಿ ಅಮೆರಿಕ ರಾಜಧಾನಿಗೆ ಬಂದಿಳಿದು ಮರುದಿನ ಟ್ರಂಪ್ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಜನವರಿ 20ರಂದು ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಪ್ರಧಾನಿಯವರ ಮೊದಲ ದ್ವಿಪಕ್ಷೀಯ ಭೇಟಿಯಾಗಲಿದೆ. ಪ್ರಧಾನಿ ಮೋದಿಯವರ ಭೇಟಿಯ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಫೆಬ್ರವರಿ 10 ಮತ್ತು 11 ರಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಕ್ಷನ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಪ್ಯಾರಿಸ್‌ಗೆ ಪ್ರಯಾಣಿಸುತ್ತಿದ್ದಾರೆ. ಟ್ರಂಪ್ ಅವರ ಕಟ್ಟುನಿಟ್ಟಿನ ವಲಸೆ ನೀತಿ ಮತ್ತು ಸುಂಕದ ಸಂಘರ್ಷ ನಡೆಯುತ್ತಿರುವಾಗಲೇ ಮೋದಿ ಭೇಟಿ ಕುತೂಹಲ ಕೆರಳಿಸಿದೆ.
ಈಗಿರುವ ಮಾಹಿತಿ ಪ್ರಕಾರ ಫೆಬ್ರವರಿ 13ರಂದು ಪ್ರಧಾನಿ ಮೋದಿಯವರು ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅಂದೇ ರಾತ್ರಿ ಟ್ರಂಪ್ ಅವರು ಮೋದಿಯವರಿಗೆ ಔತಣಕೂಟ ಏರ್ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.