ಸಿಎಂ ಕುಟುಂಬದಲ್ಲಿ ಆಗಾಗ ನಡೆಯುತ್ತಿರುವ ಭೂಮಿ ದಾನದ ತನಿಖೆಗೆ ಒತ್ತಾಯ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ಮತ್ತೊಂದು ದೂರು ಸಲ್ಲಿಸಿದ್ದಾರೆ. ತನಿಖೆಗೆ ಆಗ್ರಹಿಸಿದ್ದು, ಅಧಿಕಾರಿಗಳು ವಿಳಂಬ ಮಾಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯನವರು ಕೆಸರೆ ಗ್ರಾಮದ ಜಾಗವನ್ನು ಅರಿಶಿಣ ಕುಂಕುಮ ರೂಪದಲ್ಲಿ ಪತ್ನಿಗೆ ಕೊಟ್ಟಿದ್ದಾರೆ ಎಂದಿದ್ದರು. ಈಗ ಮತ್ತೆ ಮಲ್ಲಿಕಾರ್ಜುನಸ್ವಾಮಿ ಒಂದು ಎಕರೆ ದಾನ ಮಾಡಿದ್ದಾರೆ. ಯಾಕೆ ಮಲ್ಲಿಕಾರ್ಜುನಸ್ವಾಮಿ ಖರೀದಿ ಮಾಡಿದ ಭೂಮಿಗಳನ್ನೇ ದಾನ ಮಾಡ್ತಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯನವರು ಎಲ್ಲಿಯೂ ಹೇಳಿಲ್ಲ ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಪಾರ್ವತಿ ಅವರ ಕುಟುಂಬದ ಒಡೆತನದ ಒಟ್ಟು ಆಸ್ತಿ ಮತ್ತು ಮಲ್ಲಿಕಾರ್ಜುನ ಸ್ವಾಮಿ ಅವರು ಸಂಪಾದಿಸಿರುವ ಆಸ್ತಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
1983ರಲ್ಲಿ ಆಲನಹಳ್ಳಿಯ ಸರ್ವೇ ನಂಬರ್ 113/4ರಲ್ಲಿ 1 ಎಕರೆ ಖರೀದಿ ಮಾಡಿದ್ದಾರೆ. 1996ರಲ್ಲಿ ಮುಡಾ ಅಂತಿಮ ಅಧಿಸೂಚನೆ ಹೊರಡಿಸಿದ್ದರೂ ಡಿನೋಟಿಫೈ ಆಗಿದೆ. ಸಿದ್ದರಾಮಯ್ಯ ಪ್ರಭಾವದಿಂದ ಡಿನೋಟಿಫೈ ಆಗಿದೆ. ಅದೇ ಭೂಮಿಯನ್ನು 2010 ಅಕ್ಟೊಬರ್‌ನಲ್ಲಿ ಪಾರ್ವತಿಗೆ ದಾನ ಮಾಡಲಾಗಿದೆ. ನಂತರ ಅದನ್ನು ಒಂದು ತಿಂಗಳೊಳಗೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಿಗೆ ವರ್ಗಾಯಿಸಲಾಗಿದೆ. ಇದಾದ ನಾಲ್ಕು ತಿಂಗಳಲ್ಲಿ ಯತೀಂದ್ರ ಆ ಭೂಮಿಯನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದಾರೆ.
ಈ ವ್ಯವಹಾರಗಳನ್ನು ಸಿದ್ದರಾಮಯ್ಯ ಏಕೆ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಿರುವ ಕೃಷ್ಣ, ಮಲ್ಲಿಕಾರ್ಜುನ ಸ್ವಾಮಿ ಅವರ ಹೆಸರಿನಲ್ಲಿ ಸಿಎಂ ಬೇನಾಮಿ ಆಸ್ತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆ ಲೋಕಾಯುಕ್ತರು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿರುವ ಸ್ನೇಹಮಯಿ ಕೃಷ್ಣ, ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಳಂಬ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.