ಕೆಲವು ಮೊಬೈಲ್ ಫೋನ್‌ಗಳ ದಿಢೀರ್ ಸ್ವಿಚ್ ಆಫ್ ಆಗಿರುವುದರಿಂದ ಅನುಮಾನ
ಪ್ರಯಾಗ್‌ರಾಜ್ : ಮಹಾಕುಂಭಮೇಳದಲ್ಲಿ ಜನವರಿ 29ರಂದು ಸಂಭವಿಸಿದ ಕಾಲ್ತುಳಿತ ದುರ್ಘಟನೆಯ ಹಿಂದೆ ಸಂಚಿನ ಅನುಮಾನ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖಾ ತಂಡ ಆ ದಿನ ಆ ಪ್ರದೇಶದಲ್ಲಿದ್ದ ಸುಮಾರು 16 ಸಾವಿರ ಮೊಬೈಲ್ ನಂಬರ್‌ಗಳನ್ನು ತನಿಖೆ ಮಾಡಲು ಮುಂದಾಗಿದೆ. ಅಂದು ಅಲ್ಲಿ ಚಾಲ್ತಿಯಲ್ಲಿದ್ದ ಕೆಲವು ನಂಬರ್‌ಗಳು ದುರ್ಘಟನೆ ಸಂಭವಿಸಿದ ಬಳಿಕ ಸ್ವಿಚ್ ಆಫ್ ಆಗಿರುವುದು ಅನುಮಾನ ಉಂಟು ಮಾಡಿದೆ. ಹೀಗಾಗಿ 16 ಸಾವಿರಕ್ಕೂ ಅಧಿಕ ಮೊಬೈಲ್ ಫೋನ್‌ಗಳ ದತ್ತಾಂಶ ಮತ್ತು ಮಾಲೀಕರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.
ಮೌನಿ ಅಮಾವಾಸ್ಯೆ ದಿನವಾದ ಜ.29ರಂದು ತ್ರಿವೇಣಿ ಸಂಗಮದ ಬಳಿ ಭೀಕರ ನೂಕುನುಗ್ಗಲು ಮತ್ತು ಕಾಲ್ತುಳಿತ ಸಂಭವಿಸಿ ಕರ್ನಾಟಕದ ನಾಲ್ವರು ಸೇರಿ 30 ಮಂದಿ ಮೃತರಾಗಿ 60 ಮಂದಿ ಗಾಯಗೊಂಡಿದ್ದರು. ಜನರು ಬ್ಯಾರಿಕೇಡ್‌ಗಳ ಮೇಲಿಂದ ಹಾರಿ ಸಾಧುಗಳ ದಾರಿಗೆ ಅಡ್ಡಬಂದ ಕಾರಣ ನೂಕುನುಗ್ಗಲು ಉಂಟಾಗಿದೆ ಎಂದು ಆಗ ಹೇಳಲಾಗಿತ್ತು. ಆದರೆ ಬದುಕುಳಿದ ಕೆಲವರು ತಮ್ಮನ್ನು ಯಾರೂ ತಳ್ಳಿದಂತಾಗಿದೆ. ಎಲ್ಲವೂ ಸರಿ ಇದ್ದಾಗಲೇ ನೂಕುನುಗ್ಗಲು ಉಂಟಾಯಿತು ಎಂದು ಹೇಳಿದ್ದ ವೀಡಿಯೊಗಳು ಹರಿದಾಡಿದ್ದವು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರ ದುರಂತದ ತನಿಖೆಗೆ ನ್ಯಾಯಾಂಗ ಆಯೋಗ ರಚಿಸಿದೆ. ಈ ಆಯೋಗ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅಲ್ಲಿ ಅಂದು ಇದ್ದ ಕೆಲವು ಮೊಬೈಲ್ ನಂಬರ್‌ಗಳು ದಿಢೀರ್ ಸ್ವಿಚ್ ಆಫ್ ಆಗಿರುವ ಅಂಶ ಬೆಳಕಿಗೆ ಬಂದಿದೆ.
ಘಟನೆ ನಡೆದ ದಿನದಂದು ಸಂಗಮ್ ನೋಸ್ ಪ್ರದೇಶದಲ್ಲಿ ಸಕ್ರಿಯವಾಗಿದೆ ಎಂದು ಹೇಳಲಾದ 16,000ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳ ದತ್ತಾಂಶಗಳನ್ನು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆ ಸಂಖ್ಯೆಗಳಲ್ಲಿ ಹಲವು ಪ್ರಸ್ತುತ ಸ್ವಿಚ್ ಆಫ್ ಆಗಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ನಿಯಂತ್ರಣ ಕೊಠಡಿಯಲ್ಲಿ ಸಂಗ್ರಹಿಸಿದ ಸಿಸಿಟಿವಿ ದೃಶ್ಯಾವಳಿಗಳಿಂದ ಮುಖ ಗುರುತಿಸುವಿಕೆ ಅಪ್ಲಿಕೇಶನ್ ಮೂಲಕ ಶಂಕಿತರನ್ನು ಗುರುತಿಸಲಾಗುತ್ತಿದೆ.
ಇಂದು ಪವಿತ್ರ ಬಸಂತ ಪಂಚಮಿ ಸ್ನಾನ
ಸೋಮವಾರ ಪವಿತ್ರ ಬಸಂತ ಪಂಚಮಿ ದಿನವಾಗಿದ್ದು, ನಸುಕಿನ 1 ಗಂಟೆಯಿಂದಲೇ ಪುಣ್ಯಸ್ನಾನ ಶುರುವಾಗಿದೆ. ಮುಂಜಾನೆ 5 ಗಂಟೆಯ ಹೊತ್ತಿಗಾಗುವಾಗ ಲಕ್ಷಗಟ್ಟಲೆ ಜನ ಬಸಂತ ಪಂಚಮಿಯ ಪುಣ್ಯಸ್ನಾನ ಮಾಡಿದ್ದಾರೆ. ಒಟ್ಟಾರೆಯಾಗಿ ಈ ದಿನ ಸುಮಾರು 3 ಕೋಟಿ ಜನರು ಪುಣ್ಯಸ್ನಾನಕ್ಕಾಗಿ ಆಗಮಿಸುವ ನಿರೀಕ್ಷೆಯಿದ್ದು, ಕಾಲ್ತುಳಿತ ದುರಂತದ ಬಳಿಕ ಎಚ್ಚೆತ್ತಿರುವ ಅಧಿಕಾರಿಗಳು ಭಾರಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ತ್ರಿವೇಣಿ ಸಂಗಮದ ಘಾಟ್‌ಗಳ ಮೇಲೆ ನಿಗಾ ವಹಿಸಿರುವ ಪೊಲೀಸರು ಯಾವುದೇ ಅವಘಡಗಳಾಗದಂತೆ ಎಚ್ಚರಿಕೆ ವಹಿಸಿದ್ದಾರೆ.
4ನೇ ಮಹಾ ಸ್ನಾನ ಫೆಬ್ರವರಿ 12ರಂದು ಮಾಘ ಪೂರ್ಣಿಮೆಯಂದು ನಡೆಯಲಿದ್ದು, ಕೊನೆಯ ಸ್ನಾನ ಫೆಬ್ರವರಿ 26ರಂದು ಮಹಾಶಿವರಾತ್ರಿಯಂದು ನಡೆಯಲಿದೆ. ಅಲ್ಲಿಗೆ 144 ವರ್ಷದ ಬಳಿಕ ನಡೆಯುತ್ತಿರುವ ಮಹಾಕುಂಭಮೇಳ ಮುಕ್ತಾಯವಾಗಲಿದೆ. ಈ ಪೈಕಿ ಮಹಾಶಿವರಾತ್ರಿಯ ಕೊನೆಯ ಸ್ನಾನ ಪರಮ ಪವಿತ್ರವಾಗಿದ್ದು, ಇದಕ್ಕೆ ಅಸಂಖ್ಯಾತ ಜನರು ಆಗಮಿಸುತ್ತಾರೆ.