ಬೆಂಗಳೂರು: ನನ್ನ ಮೇಲಿನ ರಾಜಕೀಯ ಹಗೆತನದಿಂದ ಕರ್ನಾಟಕದ ಪ್ರತಿಷ್ಠಿತ ಕೈಗಾರಿಕೆ, ಅಸಂಖ್ಯಾತರಿಗೆ ಉದ್ಯೋಗ ಕಲ್ಪಿಸಿದ್ದ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ಮಂಗಳೂರು ಕಾರ್ಖಾನೆಯನ್ನು ಮುಚ್ಚಿಸಲು ರಾಜ್ಯದ ಕಾಂಗ್ರೆಸ್ ಸರಕಾರ ಷಡ್ಯಂತ್ರ ನಡೆಸಿದೆ ಎಂದು ಕೇಂದ್ರದ ಸಚಿವ ಎಚ್. ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ನಾನು ಕೇಂದ್ರ ಮಂತ್ರಿಯಾಗಿ ಏಳು ತಿಂಗಳಾಯಿತು. ನನ್ನ ಎರಡೂ ಇಲಾಖೆಗಳ ಎಲ್ಲ ಕಾರ್ಖಾನೆ, ಕಂಪನಿಗಳಿಗೆ ಭೇಟಿ ನೀಡಿದ್ದೇನೆ. ನನ್ನ ಮನವಿಗಳನ್ನು ಪ್ರಧಾನಿ ಮೋದಿ ಅವರು ದೊಡ್ಡ ಮನಸ್ಸಿನಿಂದ ಪುರಸ್ಕರಿದ್ದಾರೆ. ಆದರೆ ಕರ್ನಾಟಕಕ್ಕೆ ಇಂತಹದ್ದು ಬೇಕು ಎಂದು ರಾಜ್ಯದಿಂದ ಯಾರೊಬ್ಬರೂ ನನ್ನ ಮುಂದೆ ಬಂದು ಚರ್ಚೆ ಮಾಡಿಲ್ಲ ಎಂದರು.
ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮೊದಲ ಸಹಿ ಹಾಕಿದ್ದೇ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಉಳಿಸಲು. 2011ರಲ್ಲಿ ಸಿದ್ದರಾಮಯ್ಯ ಅವರ ಸರಕಾರವೇ ಒಪ್ಪಿಗೆ ನೀಡಿದ್ದ ಸಂಡೂರಿನ ದೇವದಾರಿ ಗಣಿ ಯೋಜನೆ ಅನುಷ್ಠಾನಕ್ಕೆ ಹಣಕಾಸು ನೆರವು ಪಡೆಯಲು ಅನುಮತಿ ಕೊಡುವ ಬಗ್ಗೆ ಹಣಕಾಸು ಸಚಿವಾಲಯಕ್ಕೆ ಶಿಫಾರಸು ಮಾಡಿದ್ದೆ. ಅದನ್ನೇ ತಿರುಚಿ ಹೇಳಿದ ಕಾಂಗ್ರೆಸ್ ನಾಯಕರು ನನ್ನ ಮೇಲಿನ ರಾಜಕೀಯ ಹಗೆತನಕ್ಕೆ ನನ್ನ ಒಳ್ಳೆಯ ಪ್ರಯತ್ನಕ್ಕೆ ವ್ಯವಸ್ಥಿತವಾಗಿ ಅಡ್ಡಿಪಡಿಸಿದರು ಎಂದು ದೂರಿದರು.
ಕುದುರೆಮುಖ ಕಂಪನಿಯ ಮಂಗಳೂರು ಕಾರ್ಖಾನೆಯನ್ನು ಮುಚ್ಚಿಸಲು ರಾಜ್ಯ ಕಾಂಗ್ರೆಸ್ ಸರಕಾರ ಏನೇನು ಷಡ್ಯಂತ್ರ ಮಾಡಬೇಕೋ ಎಲ್ಲವನ್ನೂ ಮಾಡಿದೆ. ದೇವದಾರಿ ಗಣಿ ಯೋಜನೆಗೆ ರಾಜ್ಯ ಸರಕಾರ ಅಡ್ಡಿಪಡಿಸಿದ ಕಾರಣದಿಂದ ಮಂಗಳೂರಿನ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಕಾರ್ಖಾನೆಯಲ್ಲಿ ನೂರಾರು ಕಾರ್ಮಿಕರು ಕೆಲಸ ಕಳೆದುಕೊಂಡರು. ಅವರೆಲ್ಲರೂ ನನ್ನಲ್ಲಿ ಬಂದು ದುಃಖ ತೋಡಿಕೊಂಡರು. ನನ್ನ ರಾಜ್ಯದ ಪ್ರತಿಷ್ಠಿತ ಕಾರ್ಖಾನೆಗೆ ಬೀಗ ಬೀಳಬಾರದು ಎಂಬ ಉದ್ದೇಶದಿಂದ ಕುದುರೆಮುಖ ಕಂಪನಿಯನ್ನು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ವಿಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರಕಾರದ ರಾಜಕೀಯ ಪ್ರತಿಷ್ಠೆಯಿಂದ ಕೈಗಾರಿಕೆಗಳ ಕತ್ತು ಹಿಸುಕಲು ಪ್ರಯತ್ನ ಮಾಡುತ್ತಿದ್ದರೆ ನರೇಂದ್ರ ಮೋದಿ ಅವರ ಸರಕಾರ ಅವುಗಳಿಗೆ ಜೀವ ಕೊಡುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.