ನಾಯಕರ ಜಗಳದಿಂದಾಗಿ ಅಶಿಸ್ತಿನ ಮಡುವಾದ ಶಿಸ್ತಿನ ಪಕ್ಷ
ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆಗೆ ಬಿ.ವೈ.ವಿಜಯೇಂದ್ರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಸನಗೌಡ ಯತ್ನಾಳ್ ಬಣ ನಿರ್ಧರಿಸಿದ್ದು, ಇದರಿಂದಾಗಿ ಇದೇ ಮೊದಲ ಬಾರಿಗೆ ಚುನಾವಣೆ ಮೂಲಕ ರಾಜ್ಯಾಧ್ಯಕ್ಷರನ್ನು ಆರಿಸುವ ಸನ್ನಿವೇಶ ಸೃಷ್ಟಿಯಾಗಲಿದೆ.
ಬಿಜೆಪಿಯಲ್ಲಿ ಭಿನ್ನಮತ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಬಣ ಬಡಿದಾಟದಿಂದ ಪಕ್ಷ ದುರ್ಬಲವಾಗುತ್ತಿದೆ. ಯತ್ನಾಳ್ ನೇತೃತ್ವದಲ್ಲಿ ಭಿನ್ನಮತೀಯರೆಲ್ಲ ಒಂದಾಗಿ ಯಡಿಯೂರಪ್ಪ ಪರಿವಾರದ ವಿರುದ್ಧವೇ ಹೋರಾಡುತ್ತಿರುವುದರಿಂದ ಶಿಸ್ತಿನ ಪಕ್ಷ ಅಶಿಸ್ತಿನ ಮಡುವಾಗಿ ಬದಲಾಗಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತರು ಈ ಬಗ್ಗೆ ಚಿಂತಿತರಾಗಿದ್ದರೂ ಕಚ್ಚಾಡುತ್ತಿರುವ ನಾಯಕರು ಮಾತ್ರ ಕ್ಯಾರೇ ಎನ್ನುತ್ತಿಲ್ಲ.
ರಾಜ್ಯಾಧ್ಯಕ್ಷರ ಚುನಾವಣೆಗೆ ಯತ್ನಾಳ್ ಬಣದಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಭರ್ಜರಿ ತಯಾರಿ ನಡೆದಿದ್ದು, ಯತ್ನಾಳ್ ಬಣದ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಸಭೆ ನಡೆದಿದೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್ ಸೇರಿದಂತೆ ಬಿಜೆಪಿಯ ಬಂಡಾಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಮುಂದಾಗಿರುವ ಈ ಬಣ ಪ್ರಬಲ ಅಭ್ಯರ್ಥಿಯನ್ನೇ ರಾಜ್ಯಾಧ್ಯಕ್ಷ ಚುನಾವಣೆಗೆ ಇಳಿಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ.
ವಿಜಯೇಂದ್ರ ಎದುರು ಚುನಾವಣೆಗೆ ಯಾರನ್ನು ಕಣ್ಣಕ್ಕಿಳಿಸಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ. ಯತ್ನಾಳ್ ಬಣದಿಂದ ಅಭ್ಯರ್ಥಿ ಹೆಸರು ಇನ್ನೆರಡು ದಿನಗಳಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ ಯತ್ನಾಳ್ ಬಣ ದಿಲ್ಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ನಿರ್ಧರಿಸಿದೆ. ದಿಲ್ಲಿಯಲ್ಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿ ಹೆಸರನ್ನು ಘೋಷಿಸುವುದಾಗಿಯೂ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಯಡಿಯೂರಪ್ಪ ಅವರನ್ನು ಬಿಟ್ಟರೆ ಬಿಜೆಪಿ ಉಳಿಯಲ್ಲ ಎನ್ನುವ ಕಾಲ ಹೋಯಿತು. ಯಡಿಯೂರಪ್ಪ ಇಲ್ಲದಿದ್ರೂ ಬಿಜೆಪಿ ನಡೆಯುತ್ತೆ. ಈಗಿರುವ ಹಾಲಿ ರಾಜ್ಯಾಧ್ಯಕ್ಷರು ಉದ್ಧಟತನ ಮೆರೆಯುತ್ತಿದ್ದಾರೆ. ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲೂ ಇದೇ ನಡೆ ಪ್ರದರ್ಶಿಸಿದ್ದಾರೆ ಎಂದು ಯತ್ನಾಳ್ ದೂರಿದ್ದಾರೆ. ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ವಿಜಯೇಂದ್ರ ಕೇಂದ್ರ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಪದಾಧಿಕಾರಿಗಳ ಆಯ್ಕೆ ಬಗ್ಗೆಯೂ ಯಾರೂ ಕೇಳಲಿಲ್ಲ. ಸ್ಟೇರಿಂಗ್ ಇಲ್ಲದ ಗಾಡಿಯಂತೆ ವಿಜಯೇಂದ್ರ ಅವರು ಮನಬಂದಂತೆ ನಿರ್ಧಾರ ತೆಗೆದುಕೊಳ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.ಯಡಿಯೂರಪ್ಪ ಬಿಟ್ಟರೆ ರಾಜ್ಯದಲ್ಲಿ ಬಿಜೆಪಿಯೇ ಇಲ್ಲ ಎಂಬ ವಾತಾವರಣ ಸೃಷ್ಟಿ ಮಾಡಿಬಿಟ್ಟಿದ್ದರು. ಆದರೆ ಈಗಿನ ಸ್ಥಿತಿ ಹಾಗಿಲ್ಲ. ಯಡಿಯೂರಪ್ಪ ಅವರ ಕುಟುಂಬ ಇಲ್ಲದಿದ್ದರೂ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವ ಶಕ್ತಿ ನಮಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಗುಡುಗುತ್ತಿದ್ದಾರೆ. ಈಗಾಗಲೇ ವಿಜಯೇಂದ್ರ ವಿರುದ್ಧ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆಯಲಾಗಿದೆ. ಇದು ನೂರಕ್ಕೆ ನೂರರಷ್ಟು ಸತ್ಯ. ಇದರಲ್ಲಿ ಯಾರೆಲ್ಲ ಸಹಿ ಹಾಕಿದ್ದಾರೆ ಎಂದು ಬಹಿರಂಗಪಡಿಸಲು ಸಾಧ್ಯವಿಲ್ಲ. ಪಕ್ಷದ ಆಂತರಿಕ ವಿಚಾರವಾದ್ದರಿಂದ ತಮ್ಮ ಹೆಸರು ಬಹಿರಂಗಪಡಿಸದಂತೆ ಮನವಿ ಮಾಡಿದ್ದಾರೆ. ಒಟ್ಟಾರೆ ವಿಜಯೇಂದ್ರ ಅವರ ನಡೆ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯ ಮಾಡಿದ್ದೇವೆ ಎಂದು ಯತ್ನಾಳ್ ಹೇಳಿದ್ದಾರೆ.