ಹೊಸದಿಲ್ಲಿ: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ತುಸು ಇಳಿಸಿ ಸರಕಾರ ಜನರಿಗೆ ಸಿಹಿ ಸುದ್ದಿ ನೀಡಿದೆ. ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 7 ರೂ. ಇಳಿಕೆಯಾಗಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಹೊಸ ದರದ ಪ್ರಕಾರ ದಿಲ್ಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,797 ರೂಪಾಯಿ ಆಗಿದೆ. ಗೃಹ ಬಳಕೆಯ 14 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಗೃಹಬಳಕೆ ಸಿಲಿಂಡರ್ ಬೆಲೆ ಈ ವರ್ಷದ ಆಗಸ್ಟ್‌ನಿಂದ ಬದಲಾಗಿಲ್ಲ. ಕಳೆದ 5 ತಿಂಗಳಿನಿಂದ ಗೃಹಬಳಕೆ ಸಿಲಿಂಡರ್ ಬೆಲೆ ಸ್ಥಿರವಾಗಿದೆ.
19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಹೋಟೆಲ್ ಮತ್ತು ಇತರ ವ್ಯವಹಾರಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. 2024ರ ಡಿಸೆಂಬರ್ ನಲ್ಲಿ 16 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 62 ರೂಪಾಯಿಗಳಷ್ಟು ಏರಿಕೆಯಾಗಿತ್ತು.
ಸ್ಥಳೀಯ ತೆರಿಗೆಗಳು ಮತ್ತು ಸಾರಿಗೆ ವೆಚ್ಚಗಳ ಆಧಾರದ ಮೇಲೆ ಎಲ್‌ಪಿಜಿ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ಗಳನ್ನು ಪರಿಷ್ಕರಣೆ ಮಾಡುತ್ತವೆ. ಹೊಸ ದರಗಳು ತಿಂಗಳ ಮೊದಲ ದಿನದಿಂದಲೇ ಅನ್ವಯವಾಗುತ್ತವೆ.