ಕೊನೆಯ ನಕ್ಸಲ್ ರವೀಂದ್ರ ಇಂದು ಮಧ್ಯಾಹ್ನ ಶಸ್ತ್ರತ್ಯಾಗ
ಬೆಂಗಳೂರು: ರಾಜ್ಯದಲ್ಲಿ ಉಳಿದಿರುವ ಕೊನೆಯ ನಕ್ಸಲ್ ರವೀಂದ್ರ ಇಂದು ಚಿಕ್ಕಮಗಳೂರಿನಲ್ಲಿ ಪೊಲೀಸರಿಗೆ ಶರಣಾಗಲಿದ್ದು, ಇದರೊಂದಿಗೆ ರಾಜ್ಯ ಸಂಪೂರ್ಣ ನಕ್ಸಲ್ ಮುಕ್ತವಾಗಲಿದೆ. ಇತ್ತೀಚೆಗೆ ಆರು ಜನ ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಶರಣಾಗಿದ್ದರು. ಅವರೀಗ ಪೊಲೀಸರ ವಶದಲ್ಲಿದ್ದು, ಕಾನೂನು ಪ್ರಕ್ರಿಯೆಗಳನ್ನು ಎದುರಿಸುತ್ತಿದ್ದಾರೆ. ಸರಕಾರ ಅವರಿಗೆ ಉತ್ತಮ ಪ್ಯಾಕೇಜ್ ಕೂಡ ಘೋಷಿಸಿದೆ.
ಆ ಬಳಿಕ ಒಂಟಿಯಾಗಿದ್ದ ಶೃಂಗೇರಿ ತಾಲೂಕಿನ ಕಿಗ್ಗ ಸಮೀಪದ ಕೋಟಿಹೊಂಡ ಮರಾಟಿ ಕಾಲನಿಯ ರವೀಂದ್ರನ ಶರಣಾಗತಿಗೆ ಶಾಂತಿಗಾಗಿ ನಾಗರಿಕ ವೇದಿಕೆ ಶ್ರಮಿಸಿ ಯಶಸ್ವಿಯಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಚಿಕ್ಕಮಗಳೂರಿನ ಎಸ್‌ಪಿ ಕಚೇರಿಯಲ್ಲಿ ಶಸ್ತ್ರತ್ಯಾಗ ಪ್ರಕ್ರಿಯೆ ನಡೆಯಲಿದೆ. ಶರಣಾದ ಉಳಿದ ಆರು ನಕ್ಸಲರಿಗೆ ಸಿಕ್ಕಿರುವ ಎಲ್ಲ ಸೌಲಭ್ಯಗಳು ರವೀಂದ್ರನಿಗೂ ಸಿಗಲಿದೆ ಎನ್ನಲಾಗಿದೆ.
ಕರ್ನಾಟಕದ ಕೊನೆಯ ನಕ್ಸಲ್ ಹೋರಾಟಗಾರ ಕೋಟಿಹೊಂಡ ರವೀಂದ್ರ ಗುಂಪಿನಿಂದ ದೂರಾಗಿದ್ದ. ಇಂದು ಮುಖ್ಯವಾಹಿನಿಗೆ ಬರಲಿದ್ದಾನೆ.
ಕಳೆದ ವರ್ಷ, ನಕ್ಸಲ್ ನಾಯಕ ವಿಕ್ರಮ್ ಗೌಡ ಎನ್‌ಕೌಂಟರ್ ಹೆಬ್ರಿ ಸಮೀಪ ಪೀತುಬೈಲಿನಲ್ಲಿ ಎನ್‌ಕೌಂಟರ್‌ಗೆ ಬಲಿಯಾದ ಬಳಿಕ ಉಳಿದ ಹೋರಾಟಗಾರರ ಜೀವ ಉಳಿಸಬೇಕು ಎಂದು ಪ್ರಗತಿಪರ ಚಿಂತಕರು ಆಗ್ರಹಿಸಿದ್ದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜನವರಿ 8ರಂದು ನಕ್ಸಲ್ ನಾಯಕರಾದ ಮುಂಡಗಾರು ಲತಾ (ಮುಂಡಗಾರು ಶೃಂಗೇರಿ), ವನಜಾಕ್ಷಿ (ಬಾಳೆಹೊಳೆ ಕಳಸ), ಸುಂದರಿ (ಕುತ್ಲೂರು ದಕ್ಷಿಣ ಕನ್ನಡ), ಮಾರಪ್ಪ ಅರೋಲಿ (ಕರ್ನಾಟಕ), ವಸಂತ ಟಿ (ತಮಿಳುನಾಡು), ಎನ್. ಜೀಶಾ (ಕೇರಳ) ಮುಖ್ಯವಾಹಿನಿಗೆ ಮರಳಿದ್ದರು. ಇದೀಗ ಕೊನೆಯ ಸದಸ್ಯ ರವೀಂದ್ರ ಕೂಡ ಮುಖ್ಯವಾಹಿನಿಗೆ ಬರಲಿದ್ದಾರೆ. ಇಂದು ರವೀಂದ್ರ ಶರಣಾಗುವುದರೊಂದಿಗೆ ಮಲೆನಾಡಿನ ಸುಮಾರು ಮೂರು ದಶಕಗಳ ರಕ್ತಸಿಕ್ತ ಕ್ಸಲ್ ಹೋರಾಟದ ಅಧ್ಯಾಯ ಮುಕ್ತಾಯವಾಗಲಿದೆ.