ಬೆಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸನ್ನು ತಡೆದು ಲಾಂಗ್ನಿಂದ ಗಾಜು ಒಡೆದು ಹಾಕಿ ಹಲ್ಲೆ ಮಾಡಿ ಅಟ್ಟಹಾಸ ಮೆರೆದು ಪ್ರಯಾಣಿಕರಲ್ಲಿ ಭೀತಿ ಮೂಡಿಸಿದ್ದ ರೌಡಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಹಾಸನ ಜಿಲ್ಲೆಯ ಶಾಂತಿಗ್ರಾಮ ಬಳಿ ನಡೆದಿದೆ.
ಒಂದು ಕೊಲೆ, ಮೂರು ಕೊಲೆ ಯತ್ನ ಪ್ರಕರಣಗಳ ಆರೋಪಿಯಾಗಿರುವ ಮನು (23) ಎಂಬ ಈ ರೌಡಿಯನ್ನು ಬೆಂಗಳೂರಿನಲ್ಲಿ ಬಂಧಿಸಿ ನಗರ ಠಾಣೆ ಪೊಲೀಸರು ಹಾಸನಕ್ಕೆ ಕರೆ ತರುತ್ತಿದ್ದರು. ಈ ವೇಳೆ ಮೂತ್ರ ವಿಸರ್ಜನೆ ನೆಪ ಹೇಳಿ ಶಾಂತಿಗ್ರಾಮ ಬಳಿ ರಸ್ತೆ ಬದಿ ಜೀಪ್ ನಿಲ್ಲಿಸಿದ್ದು, ಆಗ ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಹಾಸನ ನಗರ ಠಾಣೆ ಇನ್ಸ್ಪೆಕ್ಟರ್ ಮೋಹನ್ಕೃಷ್ಣ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಗುರುವಾರ ನಸುಕಿನ ಜಾವ 2 ಗಂಟೆ ವೇಳೆಗೆ ಬೈಪಾಸ್ ರಸ್ತೆಯ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸನ್ನು ಕಾರಿನಲ್ಲಿ ಬಂದು ಅಡ್ಡಹಾಕಿ ಗಲಾಟೆ ತಲವಾರು ಜಳಪಿಸಿ ಮಾಡಿ ಬಸ್ಸಿನ ಗ್ಲಾಸನ್ನು ಒಡೆದು ಹಾಕಿ ಭೀತಿ ಹುಟ್ಟಿಸಿದ್ದ. ರೌಡಿ ಮನುವಿನ ಅಟ್ಟಹಾಸವನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರು ವೀಡಿಯೊ ಮಾಡಿ ಸೋಷಿಯಲ್ ಮೀಡಿಯಾಕ್ಕೆ ಹಾಕಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು. ರೌಡಿಯ ಅಟ್ಟಹಾಸದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಅನೇಕ ಮಂದಿ ಈ ರಸ್ತೆಯಲ್ಲಿ ಸಂಚರಿಸುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.