ಕಾರು ಅಡ್ಡಗಟ್ಟಿ ಅಜ್ಞಾತ ಸ್ಥಳಕ್ಕೆ ಒಯ್ದು ಚಿತ್ರಹಿಂಸೆ
ಬೆಂಗಳೂರು: ಪುತ್ತೂರಿನ ಉದ್ಯಮಿಯೊಬ್ಬರನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ ಚಿತ್ರಹಿಂಸೆ ನೀಡಿ, 28 ಲಕ್ಷ ರೂ. ದೋಚಿರುವ ಘಟನೆ ಬೆಂಗಳೂರಿನ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಕೊಲ್ಪೆ ಗ್ರಾಮದ ನಿವಾಸಿ ಇಕ್ಬಾಲ್ ಅಪಹರಣಕ್ಕೆ ಒಳಗಾದವರಾಗಿದ್ದು, ಇವರು ಪೆಟ್ರೋಲ್ ಬಂಕ್ ಹಾಗೂ ಟ್ರಾನ್ಸ್ಪೋರ್ಟ್ ವ್ಯವಹಾರ ಹೊಂದಿದ್ದಾರೆ.
ಜ.24ರಂದು ಇಕ್ಬಾಲ್ ದೇವನಹಳ್ಳಿಯ ಹೋಟೆಲ್ಗೆ ಹೋಗಿ ಅಲ್ಲಿ ಕೆಲಸ ಮುಗಿಸಿ ಬೆಂಗಳೂರಿನಲ್ಲಿರುವ ಸ್ನೇಹಿತ ಕರೀಂ ಮನೆಯಲ್ಲಿ ಉಳಿದುಕೊಂಡು ಮರುದಿನ ಬೆಳಗ್ಗೆ ಕರೀಂ ಅವರಿಂದ ಒಂದೂವರೆ ಲಕ್ಷ ರೂ. ಪಡೆದುಕೊಂಡು, ರಾತ್ರಿ 10 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 75ರ ಕುಣಿಗಲ್ ವೃತ್ತದ ಬಳಿ ಇರುವ ಹೋಟೆಲ್ನಲ್ಲಿ ಊಟ ಮುಗಿಸಿ, ನೆಲಮಂಗಲದಿಂದ ಮಂಗಳೂರು ಕಡೆ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯೆ ಹೆದ್ದಾರಿಯಲ್ಲಿ ಮೂರು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ಇಕ್ಬಾಲ್ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಅದೇ ಕಾರಿನಲ್ಲಿ ಅವರನ್ನು ಅಪಹರಿಸಿದ್ದಾರೆ.
ಅಜ್ಞಾತ ಸ್ಥಳಕ್ಕೆ ಒಯ್ದು ಎರಡು ದಿನ ಚಿತ್ರಹಿಂಸೆ ನೀಡಿ ಬ್ಯಾಂಕ್ ಖಾತೆಯಿಂದ ಮೊಬೈಲ್ ಮೂಲಕ 15 ಲಕ್ಷ ರೂ. ವರ್ಗಾವಣೆ ಮಾಡಿಕೊಂಡು, ಭಾನುವಾರ ಸಕಲೇಶಪುರದಲ್ಲಿದ್ದ ಇಕ್ಬಾಲ್ ಸಹೋದರನ ರೆಸಾರ್ಟ್ಗೆ ತೆರಳಿ, ಅಲ್ಲಿ ಇಕ್ಬಾಲ್ರನ್ನು ಕೊಲೆ ಮಾಡುವುದಾಗಿ ಬೆದರಿಸಿ ಅವರಿಂದ 13 ಲಕ್ಷ ರೂ. ಹಣ ಪಡೆದುಕೊಂಡು, ಇಕ್ಬಾಲ್ ಅವರನ್ನು ರೆಸಾರ್ಟ್ ಬಳಿ ಬಿಟ್ಟು ಕಾರು ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದಾರೆ. ಪೊಲೀಸರಿಗೆ ದೂರು ಕೊಟ್ಟರೆ ನಿನ್ನ ಉದ್ಯಮವನ್ನು ನಾಶಮಾಡುವುದಲ್ಲದೆ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಕ್ಬಾಲ್ ದೂರು ದಾಖಲಿಸಿದ್ದಾರೆ.