ಕಡಬ: ತಾಲೂಕಿನ ಚಾರ್ವಾಕ ಗ್ರಾಮದ ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಹಾಗೂ ಮಾಚಿಲ ಉಳ್ಳಾಕ್ಲು, ಉಳ್ಳಾಲ್ತಿ ನೇಮೋತ್ಸವ ಜ.28 ರಿಂದ 31 ರ ವರೆಗೆ ನಡೆಯಲಿದೆ.
ಜಾತ್ರೋತ್ಸವದ ಅಂಗವಾಗಿ ಜ.23 ರಂದು ಗೊನೆ ಮುಹೂರ್ತ ನಡೆದಿದ್ದು, 28 ರಂದು ಬೆಳಿಗ್ಗೆ 8 ಕ್ಕೆ ಅರುವಗುತ್ತು ಮನೆಯಿಂದ ದೇವರ ಆಭರಣ ತಂದು, 8.30 ಕ್ಕೆ ನಾಲ್ಕಂಬ ಕ್ಷೇತ್ರದಲ್ಲಿ ಪ್ರಾರ್ಥನೆ, ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಬಳಿಕ ದೇವಳದಲ್ಲಿ ತೋರಣ ಮುಹೂರ್ತ ನಡೆಯಿತು. 11 ಗಂಟೆಗೆ ಅಂಕದ ಕೂಟೇಲಿನಲ್ಲಿ ಪ್ರತಿಷ್ಠಾಪನಾ ನಿಮಿತ್ತ ಗಣಹೋಮ, ಪ್ರಾರ್ಥನೆ, 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ 7 ಕ್ಕೆ ಪ್ರಾಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ, ಮಹಾಪೂಜೆ, ಅನ್ನ ಸಂತರ್ಪಣೆ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾಣಿಲ ಹಿರಿಯ ಪ್ರಾಥಮಿಕ ಶಾಲೆ, ಕೊಪ್ಪ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಪುಟಾಣಿಗಳಿಂದ, ನೃತ್ಯ ನಿನಾದ ಕುಂಬ್ಲಾಡಿ ಅವರಿಂದ ಭರತನಾಟ್ಯ ಚಾರ್ವಾಕ ವಿವೇಕ ಜಾಗೃತ ಬಳಗದ ಆಶ್ರಯದಲ್ಲಿ ಚಾರ್ವಾಕ ಗ್ರಾಮದ ಮಕ್ಕಳಿಂದ ಯಕ್ಷಗಾನ ಶಶಿಪ್ರಭಾ ಪರಿಣಯ ಪ್ರದರ್ಶನಗೊಂಡಿತು.
ಜ.29 ರಂದು ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿ, ಬೆಳಿಗ್ಗೆ 10 ಕ್ಕೆ ದೇವರ ಕೆರೆಯಿಂದ ಪವಿತ್ರ ಜಲ ತರಲಾಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆಯಾಗಿ, ಅನ್ನಸಂತರ್ಪಣೆ ಜರಗಿತು. ಸಂಜೆ 6 ಕ್ಕೆ ಆಶ್ಲೇಷ ಪೂಜೆ, 7.30 ರಿಂದ ರಂಗಪೂಜೆ, ಶ್ರೀ ದೇವರ ಭೂತ ಬಲಿ, ನೃತ್ಯ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ನಾಲ್ಕಂಬ ಕ್ಷೇತ್ರದಲ್ಲಿ ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ, ಪ್ರಸಾದ ವಿತರಣೆಯಾಗಿ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ಜರಗಿತು.
ಇಂದು ಸಂಜೆ 6 ಕ್ಕೆ ಉಳ್ಲಾಕ್ಲು ಭಂಡಾರ ತೆಗೆಯುವುದು, ಅನ್ನಸಂತರ್ಪಣೆ, 7.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 9 ರಿಂದ ಗಯಾಪದ ಕಲಾವಿದೆರ್ ಉಬಾರ್ ಅಭಿನಯಿಸುವ ತುಳು ನಾಟಕ ನಾಗ ಮಾಣಿಕ್ಯ ಪ್ರದರ್ಶನಗೊಳ್ಳಲಿದೆ.
ಜ.31 ಶುಕ್ರವಾರ ಬೆಳಿಗ್ಗೆ 8 ಕ್ಕೆ ಉಳ್ಳಾಕ್ಲು ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 6 ಕ್ಕೆ ಉಳ್ಳಾಲ್ತಿ ಭಂಡಾರ ತೆಗೆದು ನಾಲ್ಕಂಭ ಕ್ಷೇತ್ರಕ್ಕೆ ಆಗಮನ, 8 ಕ್ಕೆ ಉಳ್ಳಾಲ್ತಿ ನೇಮೋತ್ಸವ, ಪ್ರಸಾದ ವಿತರಣೆಯಾಗಿ, ಅನ್ನಸಂತರ್ಪಣೆ ಜರಗಲಿದೆ