ಮಹಾಕುಂಭಮೇಳದಲ್ಲಿ ನೂಕುನುಗ್ಗಲು : ಹಲವು ಮಂದಿಗೆ ಗಾಯ

ಮೌನಿ ಅಮವಾಸ್ಯೆ ಸ್ನಾನಕ್ಕೆ ಸೇರಿರುವ ಕೋಟಿಗಟ್ಟಲೆ ಜನ

ಪ್ರಯಾಗ್‌ರಾಜ್‌ : ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇಂದು ನಸುಕಿನ ಹೊತ್ತು ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿ ಹಲವು ಮಂದಿ ಗಾಯಗೊಂಡಿದ್ದಾರೆ. ಕೆಲವ ಸ್ಥಿತಿ ಚಿಂತಾಜನಕವಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇಂದು ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದು, ನೂಕುನುಗ್ಗಲು ಉಂಟಾಗಿತ್ತು. ಈ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಹಲವು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಹಲವು ಮಂದಿ ಕಾಲಿನಡಿಗೆ ಬಿದ್ದು, ಗಾಯಗೊಂಡಿದ್ದು, ಕೆಲವರಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ.

ಸುಮಾರು 25-30 ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ, ಗಂಗಾದಲ್ಲಿ ಅಮೃತ ಸ್ನಾನ ಅಥವಾ ಸಾಮೂಹಿಕ ಪವಿತ್ರ ಸ್ನಾನದಲ್ಲಿ ವಿಳಂಬವಾಯಿತು. ಮೌನಿ ಅಮವಾಸ್ಯೆಯಂದು ಅಮೃತ ಸ್ನಾನವು ಮಹಾಕುಂಭದ ಅತ್ಯಂತ ಮಹತ್ವದ ಆಚರಣೆಯಾಗಿದೆ. ಎರಡು ಡಜನ್‌ಗೂ ಹೆಚ್ಚು ಅಂಬುಲೆನ್ಸ್ ವಾಹನಗಳು ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ತಲುಪಿವೆ. 10 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ.































 
 

ಜನದಟ್ಟಣೆಯಿಂದಾಗಿ ರೋಗಿಗಳನ್ನು ಆಸ್ಪತ್ರೆಗೆ ಕರೆತರಲು ಅಂಬುಲೆನ್ಸ್ ವಾಹನಗಳು ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಎಲ್ಲ ರಸ್ತೆಗಳಲ್ಲೂ ಜನಜಂಗುಳಿ ಕಾಣಿಸುತ್ತಿದೆ. ಸ್ನಾನಘಟ್ಟದ ​​ಬಳಿ ನೆರೆದಿದ್ದ ಜನಜಂಗುಳಿಯಿಂದ ಕೆಲ ಮಹಿಳೆಯರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಮಹಾಕುಂಭದಲ್ಲಿ ನೆರೆದಿದ್ದ ಅಪಾರ ಭಕ್ತಾದಿಗಳಿಂದ ಪರಿಸ್ಥಿತಿ ಹತೋಟಿ ತಪ್ಪಿದೆ. ಈ ವೇಳೆ ಸ್ಥಳದಲ್ಲಿ ಆಕ್ರೋಶ ವ್ಯಕ್ತವಾಯಿತು. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಘಟನೆ ವಿಚಾರ ತಿಳಿಯುತ್ತಲೇ ತ್ವರಿತವಾಗಿ ಸ್ಪಂದಿಸಿದ್ದು, ಅಖಾಡಗಳ ಮುಖ್ಯಸ್ಥರ ಜೊತೆಗೆ ನೇರವಾಗಿ ಮಾತನಾಡಿ ಯಾವುದೇ ನೂಗುನುಗ್ಗಲು ಉಂಟಾಗಲು ಅವಕಾಶ ಕೊಡದಂತೆ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಕರೆ ಮಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top