ಮಂಗಳೂರು : ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಾಲ್ಗೊಂಡು ಸೌಹಾರ್ದ ಮೆರೆದಿದ್ದಾರೆ. ನದಿಗೆ ಇಳಿದು ಪವಿತ್ರ ನೀರನ್ನು ಚಿಮುಕಿಸಿಕೊಂಡರಲ್ಲದೆ, ದೋಣಿ ವಿಹಾರ ನಡೆಸಿ ಮಹಾಕುಂಭದ ಸೊಬಗನ್ನು ಸವಿದರು.
ಉತ್ತರಪ್ರದೇಶದ ಸ್ಪೀಕರ್ ಸತೀಶ್ ಮಹಾನಾ ಅವರ ಆಹ್ವಾನದ ಮೇರೆಗೆ ಶುಕ್ರವಾರ ಕುಂಭಮೇಳದಲ್ಲಿ ಪಾಲ್ಗೊಂಡ ಖಾದರ್, ನಾಗಾಸಾಧುಗಳು ಮತ್ತು ಅಘೋರಿಗಳೊಂದಿಗೆ ಆಧ್ಯಾತ್ಮಿಕತೆ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಅಲಹಾಬಾದ್‌ನಲ್ಲಿ ಹಜರತ್ ಮಖ್ದೂಮ್ ಸಾದತ್ ಚೌಧೋನ್ ಪೀರೋ ದರ್ಗಾ ಶರೀಫ್‌ಗೆ ಭೇಟಿ ನೀಡಿ ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸ್ಪೀಕರ್ ಸತೀಶ್ ಮಹಾನಾ ಆಹ್ವಾನದ ಮೇರೆಗೆ ನಾನು ಮತ್ತು ಮಿತ್ರರು ಮಹಾಕುಂಭಮೇಳದಲ್ಲಿ ಪಾಲ್ಗೊಂಡಿದ್ದೇವೆ. ತುಂಬಾ ಖುಷಿಯಾಗಿದೆ. ಉತ್ತಮ ಅನುಭವ ಪಡೆದುಕೊಂಡೆ. ದೇಶದ ವಿವಿಧ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ವಿಶೇಷ ಅವಕಾಶ ಲಭಿಸಿತು. ಇದು ವಿಶ್ವಾಸಭರಿತ ಸಮಾಜ ನಿರ್ಮಾಣಕ್ಕೆ ಪೂರಕ ಎಂದು ಖಾದರ್ ಹೇಳಿದ್ದಾರೆ.