ಮೈಸೂರು: ಕಳೆದ ಕೆಲ ಸಮಯದಿಂದ ಜನರನ್ನು ಇನ್ನಿಲ್ಲದಂತೆ ಕಾಡಿ ಜೀವ ಹಿಂಡುತ್ತಿರುವ ಮೈಕ್ರೊ ಫೈನಾನ್ಸ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರಕಾರ ಅಬ್ಬರಿಸುತ್ತಿದ್ದರೂ ಈ ಫೈನಾನ್ಸ್ ಸಂಸ್ಥೆಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಫೈನಾನ್ಸ್ನವರ ಕಾಟಕ್ಕೆ ಹೆದರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ವಿಷದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದೆ.
ಜಯಶೀಲಾ (53) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆ ಐಐಎಫ್ಎಲ್ ಫೈವ್ ಸ್ಟಾರ್ ಮೈಕ್ರೊ ಫೈನಾನ್ಸ್ ಎಂಬ ಸಂಸ್ಥೆಯಿಂದ ಮನೆ, ವ್ಯವಸಾಯ ಹಾಗೂ ಹಸು ಸಾಕಾಣಿಕೆಗಾಗಿ 5 ಲಕ್ಷ ರೂ. ಸಾಲ ಪಡೆದಿದ್ದರು. ಪ್ರತಿ ತಿಂಗಳು 20,000ಕ್ಕೂ ಹೆಚ್ಚು ಇಎಂಐ ಕಟ್ಟಬೇಕಾಗಿತ್ತು. ಸಾಲದಲ್ಲಿ ತೆಗೆದುಕೊಂಡಿದ್ದ ಹಸು ಇತ್ತೀಚೆಗೆ ಮೃತಪಟ್ಟಿತ್ತು. ಹೀಗಾಗಿ ಸಾಲದ ಕಂತು ಕಟ್ಟಿ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದರು.
ಈ ಹಿನ್ನೆಲೆ ಸಮೀಪದ ಹುಲ್ಲಹಳ್ಳಿಗೆ ತೆರಳಿ ವಿಷದ ಮಾತ್ರೆಗಳನ್ನು ತಂದು ಜಮೀನಿನಲ್ಲಿ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.