ಪುತ್ತೂರು: ಜೆಸಿಐ ಪುತ್ತೂರು ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕುರಿತಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಕರ್ನಾಟಕ ಪೊಲೀಸ್, ಆರೋಗ್ಯ ಇಲಾಖೆಗಳ ಸಹಕಾರದೊಂದಿಗೆ ಪುತ್ತೂರು ತಾಲೂಕು ವ್ಯಾಪ್ತಿಯ 100 ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಕೊಂಬೆಟ್ಟು ಬಂಟರ ಭವನದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಚಾಲನೆ ನೀಡಿ, ಜೆಸಿಐ ಪುತ್ತೂರಿನ ವಿಭಿನ್ನ ಪ್ರಯತ್ನಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್., ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ , ಪುತ್ತೂರು ನಗರ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಮಾದಕ ವಸ್ತುಗಳಿಂದ ಉಂಟಾಗುವ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಅಧ್ಯಕ್ಷತೆಯನ್ನು ಪುತ್ತೂರು ಜೆಸಿಐ ಅಧ್ಯಕ್ಷ ಭಾಗ್ಯೇಶ್ ರೈ ವಹಿಸಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಿ, ಮತ್ತು ವಿವಿಧ ಶಾಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಿಕೊಡುವ ಕೃಷ್ಣ ಮೋಹನ್, ದಾಮೋದರ ಪಾಟಾಳಿ, ಶಶಿರಾಜ್ ರೈ, ಮಾಲಿನಿ ಕಶ್ಯಪ್, ಪಶುಪತಿ ಶರ್ಮ, ಮನೋಹರ ಪಾಟಳಿ, ಶರತ್ ಶ್ರೀನಿವಾಸ, ಸುಜನ್ ಕೇವಳ, ಜಗನ್ನಾಥ್ ಅರಿಯಡ್ಕ ಅವರಿಗೆ “ಡ್ರಗ್ಸ್ ಮುಕ್ತ ಪುತ್ತೂರು” ಲೋಗೋ ಇರುವ ಕ್ಯಾಪ್ ತೊಡಿಸುವ ಮೂಲಕ ತರಬೇತುದಾರರಿಗೆ ಶುಭ ಹಾರೈಸಿದರು.
ಅತಿಥಿಗಳನ್ನು ರಂಜಿನಿ ಶೆಟ್ಟಿಯವರು ಬರಮಾಡಿಕೊಂಡರು. ಜೆಸಿ ವಾಣಿಯನ್ನು ಜೆಸಿ ಜಗನ್ನಾಥ ಅರಿಯಡ್ಕ ವಾಚಿಸಿದರು. ವೇದಿಕೆಯಲ್ಲಿ ಜೆಸಿಐ ವಲಯ ಉಪಾಧ್ಯಕ್ಷ ಜೆಸಿ ಸುಹಾಸ್ ಮರಿಕೆ, ನಿಕಟ ಪೂರ್ವ ಅಧ್ಯಕ್ಷ ಮೋಹನ್ ಕೆ., ಕಾರ್ಯಕ್ರಮ ನಿರ್ದೇಶಕರಾದ ಜಿತೇಶ್ ರೈ, ಶರತ್ ಶ್ರೀನಿವಾಸ್, ಕಾರ್ಯದರ್ಶಿ ಜೆಸಿ ಮನೋಹರ ಪಾಟಾಳಿ ಉಪಸ್ಥಿತರಿದ್ದರು. ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಹಾಗೂ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಿನ್ಸಿಪಾಲ್‍ವಸಂತ ಮೂಲ್ಯರವರನ್ನು ಜೆಸಿಐಯ ವತಿಯಿಂದ ಗೌರವಿಸಲಾಯಿತು. ಮಹಿಳಾ ಸಮನ್ವಯಾಧಿಕಾರಿ ಆಶಾ ಮೋಹನ್, ಭವಿತ್, ಕೋಶಾಧಿಕಾರಿ ರುಕ್ಮಯ್ಯ, ರಘು ಶೆಟ್ಟಿ, ರಾಮಕೃಷ್ಣ ಪ್ರೌಢಶಾಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಪ್ರೌಢಶಾಲಾ ವಿಭಾಗದ ಶಿಕ್ಷಕ ವೃಂದದವರು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.
























