ಗಂಡನಿಗೆ ಕಿರುಕುಳ : ಕಿರುತೆರೆ ನಟಿ ವಿರುದ್ಧ ಎಫ್‌ಐಆರ್‌

ಪತಿಗೆ ಹಲ್ಲೆ ಮಾಡಿ ಮನೆಯಿಂದ ಹೊರಹಾಕಿ ಬ್ಲ್ಯಾಕ್‌ಮೇಲ್‌

ಬೆಂಗಳೂರು: ಪತಿಗೆ ಮಾನಸಿಕ ಕಿರುಕುಳ ನೀಡಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ಕಿರುತೆರೆ ನಟಿ ಶಶಿಕಲಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪತಿ ನಿರ್ದೇಶಕ ಟಿ.ಜಿ. ಹರ್ಷವರ್ಧನ್ ನೀಡಿರುವ ದೂರನ್ನು ಆಧರಿಸಿ ಶಶಿಕಲಾ ಹಾಗೂ ಯೂಟ್ಯೂಬರ್ ಅರುಣ್‌ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿನಿಮಾ ನಿರ್ದೇಶನ ಜತೆಗೆ ಕ್ಯಾಬ್ ಚಾಲಕನಾಗಿಯೂ ಕೆಲಸ ಮಾಡುತ್ತಿರುವ ನನಗೆ 2021ರಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಶಶಿಕಲಾ ಪರಿಚಯವಾಯಿತು. ತನ್ನೊಂದಿಗೆ ಸಂಬಂಧ ಹೊಂದಿದರೆ ಸಿನಿಮಾದಲ್ಲಿ ಹಣ ಹೂಡಿಕೆ ಮಾಡುವುದಾಗಿ ನಂಬಿಸಿದ್ದರು. ಸಿನಿಮಾ ನಿರ್ಮಾಣ ಮಾಡುತ್ತಾರೆಂಬ ಆಸೆಯಿಂದ ಒಪ್ಪಿಕೊಂಡೆ. ಅವರನ್ನು ಮದುವೆಯಾಗಲು ಆಗುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಅದಕ್ಕೆ ಅವರು ಒಪ್ಪಿದ್ದರು. ಕೆಲವು ದಿನಗಳ ಬಳಿಕ ಮದುವೆ ಆಗುವಂತೆ ಬಲವಂತ ಮಾಡಿದರು. ನಮ್ಮಿಬ್ಬರ ನಡುವಿನ ಮೊಬೈಲ್ ಕರೆಗಳ ಸಂಭಾಷಣೆಗಳ ರೆಕಾರ್ಡಿಂಗ್‌ ಇಟ್ಟುಕೊಂಡು ಬೆದರಿಸಿದ್ದರು.































 
 

ಮದುವೆಗೆ ಒಪ್ಪದಿದ್ದಾಗ ನಾಗರಬಾವಿಯಲ್ಲಿರುವ ಕಚೇರಿಗೆ ಬಂದು ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದರು. ಈ ಬಗ್ಗೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಬಳಿಕ ಇಬ್ಬರಿಗೂ ಪೊಲೀಸರು ಬುದ್ಧಿ ಮಾತು ಹೇಳಿ ಕಳಿಸಿದ್ದರು. 2022ರಲ್ಲಿ ಶಶಿಕಲಾ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ನನ್ನನ್ನು ಬಂಧಿಸಿದ್ದರು. ಜೈಲಿನಿಂದ ಹೊರಬಂದ ಬಳಿಕವೂ ನನಗೆ ಸಿನಿಮಾ ನಿರ್ದೇಶನ ಮಾಡಲು ಬಿಡುವುದಿಲ್ಲ ಎಂದು ಶಶಿಕಲಾ ಬೆದರಿಸಿದ್ದರು.
ವೃತ್ತಿ ಜೀವನ ಹಾಳಾಗುವುದು ಬೇಡ, ಆಕೆಯನ್ನು ಮದುವೆಯಾಗು ಎಂದು ನಿರ್ಮಾಪಕರು ನೀಡಿದ್ದ ಸಲಹೆ ಮೇರೆಗೆ 2022ರ ಮಾರ್ಚ್‌ನಲ್ಲಿ ಶಶಿಕಲಾ ಅವರನ್ನು ಮದುವೆಯಾದೆ. ಮದುವೆಯಾದ ಕೆಲ ದಿನಗಳ ನಂತರ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಮನೆಗೆ ಬಂದು ಹೋಗಲಾರಂಭಿಸಿದ್ದರು. ಅದನ್ನು ಪ್ರಶ್ನಿಸಿದಾಗ ನನ್ನನ್ನು ಮನೆಯಿಂದ ಹೊರಹಾಕುತ್ತಿದ್ದರು‌. ಒಂದೆರಡು ಗಂಟೆಗಳ ಬಳಿಕ ತಾವೇ ಮನೆಯೊಳಗೆ ಸೇರಿಸುತ್ತಿದ್ದರು.

ಈ ನಡುವೆ ಗಂಗೊಂಡನಹಳ್ಳಿಯಲ್ಲಿ ಶಶಿಕಲಾ ಅನಾಥಾಶ್ರಮ ಆರಂಭಿಸಿದ್ದರು. ಯಾಕೆ ಎಂದು ಪ್ರಶ್ನಿಸಿದಾಗ, ಕಪ್ಪು ಹಣವನ್ನು ಬದಲಾಯಿಸುವ ಅವಕಾಶ ಸಿಗುತ್ತದೆ ಎಂದಿದ್ದರು. 2024ರ ಆಗಸ್ಟ್‌ನಲ್ಲಿ ನನ್ನನ್ನು ಮನೆಯಿಂದ ಹೊರಹಾಕಿರುವ ಶಶಿಕಲಾ ಯೂಟ್ಯೂಬ್ ಚಾನೆಲ್‌ ಒಂದರ ಮಾಲೀಕನ ಜತೆ ಸೇರಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವುದನ್ನು ನಿಲ್ಲಿಸಲು ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇರಿಸಿದ್ದಾರೆ ಎಂದು ದೂರಿನಲ್ಲಿ ಹರ್ಷವರ್ಧನ್ ಅವರು ಹೇಳಿಕೊಂಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top