ಪುತ್ತೂರು: ಇತಿಹಾಸ ಪ್ರತಿಯೊಬ್ಬರಿಗೂ ತಿಳಿದಿರಬೇಕು. 1947 ರಲ್ಲಿ ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಗಿ ಭಾರತಕ್ಕೆ ಸ್ವತಂತ್ರ ಸಿಕ್ಕಿದ ಮರುದಿನದಿಂದಲೇ ಪ್ರಜಾಪ್ರಭುತ್ವದ ಅತೀ ದೊಡ್ಡ ದೇಶ ಎಂದು ಭಾರತ ಹೆಸರುಗಳಿಸಿದೆ. ಇದಕ್ಕೆ ಕಾರಣ ಮತದಾನ ಹಕ್ಕು ಪ್ರತಿಯೊಬ್ಬರಿಗೂ ನೀಡಿರುವುದು ಎಂದು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದರು.

ಅವರು ಶನಿವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿ ಜಂಟಿ ಆಶ್ರಯದಲ್ಲಿ ಭಾರತ ಚುನಾವಣಾ ಆಯೋಗದ ಸಹಕಾರದೊಂದಿಗೆ15ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮತದಾರರು ಸಮಾಜದ ಒಂದು ಭಾಗ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮತದಾನಕ್ಕೆ ನೋಂದಾವಣೆ ಮಾಡಿಕೊಂಡು ಮತದಾನ ಮಾಡುವ ಮೂಲಕ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಅಭಿವೃದ್ಧಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು ಎಂದ ಅವರು, ಮತದಾನ ಅಮೂಲ್ಯವಾದ ಹಕ್ಕು. ಈ ನಿಟ್ಟಿನಲ್ಲಿ ಮತದಾನದ ಹಕ್ಕನ್ನು ಪ್ರತಿಯೊಬ್ಬರು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.

ಸಹಾಯಕ ಉಪನ್ಯಾಸಕ ನಂದೀಶ್ ವೈ.ಡಿ. ಮತದಾನದ ಕುರಿತು ಉಪನ್ಯಾಸ ನೀಡಿ, ಮತದಾನ ದಿನಾಚರಣೆ ಕೇವಲ ಒಂದು ಕಾರ್ಯಕ್ರಮ ಅಲ್ಲ. ಬದಲಾಗಿ ಅದು ಒಂದು ಹಬ್ಬ. ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಎಷ್ಟು ಮಹತ್ವ ಇದೆ ಎಂಬುದನ್ನು ಮೊದಲು ಅರಿಯಬೇಕು. ಮತದಾನ ಮಾಡದೆ ದೇಶದ ಅಭಿವೃದ್ಧಿಯಲ್ಲಿ ನಾವು ಪಾತ್ರರಾಗದಿದ್ದಲ್ಲಿ ಮತದಾನಕ್ಕೆ ಅರ್ಥವೇ ಇಲ್ಲ. ಪ್ರತಿಯೊಂದು ಆಯಾಮವನ್ನು ಪ್ರಭಾವಿಸುವುದು ಮತದಾನ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದ ಅವರು, ಭಾರತ ಸರಕಾರ ಮತದಾನದ ನಿಟ್ಟಿನಲ್ಲಿ ಪ್ರತೀ ತಲೆಗೆ 700 ರಿಂದ 800 ರೂ.ಗಳನ್ನು ವೆಚ್ಚ ಮಾಡುತ್ತಿದೆ. ಆದ್ದರಿಂದ ಮತದಾನದಿಂದ ಹೊರಗೆ ಉಳಿಯುವುದು ನಮಗೆ ನಾವೇ ಮಾಡುವ ವಂಚನೆ ಎಂದು ಹೇಳಿದರು.
ವೇದಿಕೆಯಲ್ಲಿ ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ, ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ಪ್ಯಾನಲ್ ನ್ಯಾಯವಾದಿ ಅಶ್ವಿನಿ ಕೆ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮತದಾನ ನೋಂದಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡವರನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಉಪತಹಸೀಲ್ದಾರ್ ಸುಲೋಚನಾ ಪ್ರಾಸ್ತಾವಿಕವಾಗಿ ಮಾತನಾಡಿದರು.