ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ಬಂದ್
ಮಂಗಳೂರು: ಸರ್ಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುವ ಕುಟುಂಬದ ಸದಸ್ಯರ ಇ-ಕೆವೈಸಿಗೆ ಕೊನೆಯ ಅವಕಾಶ ನೀಡಲಾಗಿದೆ. ಒಂದು ವೇಳೆ ಸದಸ್ಯರು ಹಾಜರಾಗಿ ಕೆವೈಸಿ ಮಾಡಿಸದಿದ್ದರೆ ಅವರ ಪಾಲಿನ ಪಡಿತರ ಬಂದ್ ಮಾಡಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ.
ಪಡಿತರ ಚೀಟಿ ಫಲಾನುಭವಿಗಳ ಪೈಕಿ ಕೆಲವು ಸದಸ್ಯರು ಒಟಿಪಿ ಮೂಲಕ ತಿದ್ದುಪಡಿ ಮಾಡಿದ್ದು, ಸದಸ್ಯರು ಜೀವಂತ ಇರುವ ಬಗ್ಗೆ ಜೀವ ಮಾಪನ ನೀಡಿ ಇ-ಕೆವೈಸಿ ಮಾಡುವುದು ಕಡ್ಡಾಯ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ. ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲ ಸದಸ್ಯರ ಇ- ಕೆವೈಸಿ ನೀಡಬೇಕಾಗಿದ್ದು, ಪಡಿತರ ಚೀಟಿಗಳಲ್ಲಿನ ಕುಟುಂಬದ ಮುಖ್ಯಸ್ಥ, ಸಂಬಂಧ, ಲಿಂಗ, ಜಾತಿ, ಎಲ್ಪಿಜಿ ವಿವರ, ಮೊಬೈಲ್ ಸಂಖ್ಯೆ ತುರ್ತಾಗಿ ಸಂಗ್ರಹಿಸಬೇಕು. ಆದುದರಿಂದ ಜಿಲ್ಲೆಯಲ್ಲಿ ಚಾಲ್ತಿ ಇರುವ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳ ಇ-ಕೆವೈಸಿ ನೀಡಲು ಆಧಾರ್ ಕಾರ್ಡ್, ಎಲ್ಪಿಜಿ ದಾಖಲೆ, ಜಾತಿ ಪ್ರಮಾಣ ಪತ್ರ (ಇದ್ದಲ್ಲಿ), ಆದಾಯ ಪ್ರಮಾಣ ಪತ್ರ, ಎಂಡೋಸಲ್ಫಾನ್ ಪೀಡಿತರಂತಹ ವಿಶೇಷ ವರ್ಗದವರು ಹೊಂದಿರುವ ದೃಢ ಪತ್ರಗಳಿದ್ದಲ್ಲಿ ಅವುಗಳೊಂದಿಗೆ ತಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಲು ತಿಳಿಸಲಾಗಿದೆ.
ಆದ್ಯತೆ ಮೇರೆಗೆ ಇ -ಕೆವೈಸಿ ಮಾಡದಿರುವ ಅಂತ್ಯೋದಯ ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳಿಗೆ ಇ-ಕೆವೈಸಿ ಕಡ್ಡಾಯವಾಗಿ ಮಾಡಲೇ ಬೇಕಾಗಿದ್ದು, ಇ-ಕೆವೈಸಿ ನೀಡಲು ಯಾವುದೇ ಶುಲ್ಕವಿರುವುದಿಲ್ಲ. ಇದನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ಮಾಡಲು ಕ್ರಮ ವಹಿಸಲಾಗಿರುತ್ತದೆ. ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಸಹಕರಿಸಲು ಕೋರಿದೆ, ಇ-ಕೆವೈಸಿ ಸಂಗ್ರಹಣೆಯನ್ನು ಕರ್ನಾಟಕ ಗ್ರಾಮ ಒನ್ ಕೇಂದ್ರಗಳಲ್ಲಿ ಕೂಡಾ ಮಾಡಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಾಲೂಕು ತಹಶೀಲ್ದಾರರು ಮತ್ತು ಸಹಾಯಕ ನಿರ್ದೇಶಕರು, ಅನೌಪಚಾರಿಕ ಪಡಿತರ ಪ್ರದೇಶ ಇವರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.