ತಹಾವುರ್ ರಾಣಾನನ್ನು ಭಾರತಕ್ಕೊಪ್ಪಿಸಲು ಆದೇಶಿಸಿದ ಅಮೆರಿಕದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯ ಸೂತ್ರಧಾರ ತಹಾವುರ್ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಿಕೊಳ್ಳಲು ಇದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ. ಅಮೆರಿಕದ ಸುಪ್ರೀಂ ಕೋರ್ಟ್ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಲು ಅನುಮತಿ ನೀಡಿದೆ.
ಪಾಕಿಸ್ಥಾನ ಮೂಲದ ಕೆನಡ ಪ್ರಜೆ 2008ರಲ್ಲಿ ಮುಂಬಯಿ ಮೇಲಾದ ಭೀಕರ ಭಯೋತ್ಪಾದಕ ದಾಳಿಯ ಸೂತ್ರಧಾರ ಎನ್ನಲಾಗಿದೆ. ತನ್ನ ಗಡಿಪಾರು ಆದೇಶ ಪ್ರಶ್ನಿಸಿ ರಾಣಾ ಅಮೆರಿಕದ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದ. ಈ ಮೇಲ್ಮನವಿಯನ್ನು ವಜಾಗೊಳಿಸುವ ಮೂಲಕ ಸುಪ್ರೀಂ ಕೋರ್ಟ್ ಗಡಿಪಾರಿಗಿದ್ದ ಕೊನೆಯ ತಡೆಯನ್ನೂ ನಿವಾರಿಸಿದೆ.
2008ರ ನ.26ರಂದು ರಾತ್ರಿ ಪಾಕಿಸ್ಥಾನದ ಹತ್ತು ಭಯೋತ್ಪಾದಕರು ಸಮುದ್ರ ಮಾರ್ಗದ ಮೂಲಕ ಮುಂಬಯಿಗೆ ನುಗ್ಗಿ ಬಂದು ತಾಜ್ ಪಂಚತಾರಾ ಹೋಟೆಲ್, ಆಸ್ಪತ್ರೆ, ರೈಲು ನಿಲ್ದಾಣ ಸಹಿತ 12 ಸ್ಥಳಗಳಿಗೆ ದಾಳಿ ಮಾಡಿದ್ದರು. ನ.29ರ ತನಕ ಅವರ ದಾಳಿ ಮುಂದುವರಿದಿತ್ತು. ಈ ದಾಳಿಯಲ್ಲಿ 175 ಮಂದಿ ಸತ್ತು ನೂರಾರು ಮಂದಿ ಗಾಯಗೊಂಡಿದ್ದರು. ಹಲವು ಪೊಲೀಸ್ ಅಧಿಕಾರಿಗಳೂ ಬಲಿಯಾಗಿದ್ದರು. ಪಾಕಿಸ್ಥಾನದ ಲಷ್ಕರ್ ಎ ತಯ್ಯಬ ಭಯೋತ್ಪಾದಕ ಸಂಘಟನೆ ಈ ದಾಳಿಯನ್ನು ನಡೆಸಿತ್ತು.